

ಸುಬ್ರಹ್ಮಣ್ಯ: ಭಾರತವನ್ನು ಸಕಲ ಸಂಪದ್ಭರಿತ ರಾಷ್ಟ್ರವನ್ನಾಗಿಸಲು ಗೋ ಸಂರಕ್ಷಣೆ ಅತ್ಯಗತ್ಯ. ಗೋವನ್ನು ರಾಷ್ಟ್ರಪ್ರಾಣಿಯಾಗಿ ಘೋಷಿಸಲು ಆದ್ಯತೆ ನೀಡಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು. ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಟ್ರಸ್ಟ್ ವತಿಯಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ನಂದಿ ರಥಯಾತ್ರೆ ಶುಕ್ರವಾರ ಕುಕ್ಕೆಸುಬ್ರಹ್ಮಣ್ಯ ಪುರಪ್ರವೇಶಿಸಿದಾಗ ಸ್ವಾಗತಿಸಿ ಆಶೀರ್ವಚನ ನೀಡಿದರು. ಗೋವು ನಮ್ಮ ನಿಜವಾದ ಸಂಪತ್ತು. ಗೋಮಾತೆ ಪಾಲನೆ ಪ್ರತಿ ಮನೆಯಲ್ಲಿ ಮಾಡುವತ್ತ ಗಮನ ಹರಿಸುವುದು ಅತ್ಯಗತ್ಯ. ಭೂಮಿಯ ಫಲವತ್ತತೆ ಹೆಚ್ಚಿಸಲು ಗೋವಿನಿಂದ ಸಾಧ್ಯ. ಗೋವಿನ ಸಂರಕ್ಷಣೆ, ಗೋವಿನ ಉತ್ಪನ್ನಗಳ ಸ್ವೀಕಾರ ಆಗಬೇಕು. ಈ ಎಲ್ಲ ಉದ್ದೇಶಗಳೊಂದಿಗೆ ನಂದಿ ರಥಯಾತ್ರೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ರಾಜ್ಯಾದ್ಯಾಂತ ಸಂಚರಿಸಲಿದ್ದು, ನಾವೆಲ್ಲ ಬೆಂಬಲಿಸೋಣ ಎಂದರು. ರಾಷ್ಟ್ರೀಯ ಗೋಸೇವಾ ಸಂಸ್ಥಾನ ಟ್ರಸ್ಟ್ ಅಧ್ಯಕ್ಷ ಭಕ್ತಿಭೂಷನ್ ದಾಸ್, ಗೋ ಸೇವಾ ಗತಿವಿಧಿ ಕರ್ನಾಟಕ ಉತ್ತರ ಪ್ರಾಂತ ಪ್ರಶಿಕ್ಷಣ ಪ್ರಮುಖ್ ದತ್ತಾತ್ರೇಯ ಭಟ್, ಪ್ರಮುಖರಾದ ವೆಂಕಟ್ ವಳಲಂಬೆ, ಕಿಶೋರ್ ಶಿರಾಡಿ, ಯಜ್ಞೇಶ್ ಆಚಾರ್, ಜಯಪ್ರಕಾಶ್ ಕೂಜುಗೋಡು, ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ಅಶೋಕ್ ಕುಮಾರ್, ಪ್ರಮೋದ್ ಕಡಬ, ಗಿರಿಧರ ಸ್ಕಂದ, ಶ್ರೀಕುಮಾರ್ ಬಿಲದ್ವಾರ, ಸಾರ್ವಜನಿಕರು ಉಪಸ್ಥಿತರಿದ್ದರು. ಭವ್ಯ ಸ್ವಾಗತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ ನಂದಿ ರಥಯಾತ್ರೆಯನ್ನು ಸುಬ್ರಹ್ಮಣ್ಯದ ಕಾಶಿಕಟ್ಟೆ ಗಣಪತಿ ದೇವಸ್ಥಾನದ ಮುಂಭಾಗ ಸ್ವಾಗತಿಸಲಾಯಿತು. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಗೋವಿಗೆ ಹಾರ ಹಾಕಿ, ಫಲಹಾರ ನೀಡಿ ಹರಸಿದರು. ಬಳಿಕ ಮೆರವಣಿಗೆಯಲ್ಲಿ ನಂದಿ ರಥ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಗೆ ಸಾಗಿ ಬಂತು. ಕುಣಿತ ಭಜನೆ, ಪೂರ್ಣಕುಂಭ ಮೆರವಣಿಗೆಯ ಆಕರ್ಷಣೆಯಾಗಿತ್ತು.
ಲಾಭದಾಯಕ ದೃಷ್ಟಿಯಿಂದ ಬೆಳೆಗಳಿಗೆ ರಾಸಾಯನಿಕ ಹಾಕುವುದರಿಂದ ವಿಷಯುಕ್ತ ಆಹಾರ ಸೇವನೆ ಮಾಡುವಂತಾಗಿದೆ. ವಿಷಮುಕ್ತ ಆಹಾರ ಪಡೆಯಬೇಕಾದರೆ ಗೋವುಗಳನ್ನು ಸಾಕಬೇಕು. ಇದರಿಂದಾಗಿ ಗೋ ಸಮೃದ್ಧಿ ಉಂಟಾಗುವುದು ಮಾತ್ರವಲ್ಲದೆ ಆರೋಗ್ಯ ಸಮೃದ್ಧಿಗೂ ಬುನಾದಿಯಾಗುವುದು. ನಮಗೆ ಸಾವಯವ ಗೊಬ್ಬರ ದೊರಕುವುದು. ಸಾವಯವ ಗೊಬ್ಬರದಿಂದ ಬೆಳೆಗಳನ್ನು ಬೆಳೆಯಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠ