

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಹೆಚ್ಚಿನ ದರಕ್ಕೆ ಪಶು ಆಹಾರ ಮಾರಾಟ ಮಾಡುತ್ತಿರುವ ಆರೋಪ ಕೇಳಿಬರುತ್ತಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬೇಡಿಕೆಗೆ ಅನುಗುಣವಾಗಿ ಪಶು ಆಹಾರ ಪೂರೈಕೆ ಆಗುತ್ತಿಲ್ಲ ಎನ್ನಲಾಗಿದ್ದು, ದಾಸ್ತಾನಿರುವ ಹಿಂಡಿ, ಬೂಸಾದ 50 ಕೆಜಿ ಚೀಲವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ರೈತರೂ ಸಹ ಬೇರೆ ದಾರಿಯಿಲ್ಲದೆ ಹೇಳಿದಷ್ಟು ದರ ತೆತ್ತು ಕೊಂಡುಕೊಳ್ಳುವಂತಾಗಿದೆ.
ಲಾಕ್‌ಡೌನ್‌ನಿಂದಾಗಿ ಕೈಗಾರಿಕೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಕ್ಕಿ ತವಡು, ಸೂರ್ಯಕಾಂತಿ, ಕಡಲೆಕಾಯಿ ಹಿಂಡಿ ಅಭಾವ ಎದುರಾಗಿದೆ. ಬಹುತೇಕ ಪಶು ಆಹಾರಗಳಿಗೆ ಅವಶ್ಯವಿರುವ ತವಡು, ಹಿಂಡಿಯನ್ನು ಉತ್ತರ ಕರ್ನಾಟಕ ಭಾಗದ ಎಣ್ಣೆ ಕೈಗಾರಿಕೆಗಳು ಪೂರೈಸುತ್ತಿದ್ದವು. ಆದರೆ ಕೆಲವು ತಿಂಗಳಿಂದ ಎಣ್ಣೆ ತಯಾರಿಕಾ ಘಟಕಗಳು ಬಂದ್ ಆಗಿರುವುದರಿಂದ ಪಶು ಆಹಾರ ವಸ್ತುಗಳ ಸರಬರಾಜು ವ್ಯತ್ಯಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಅಂಗಡಿ ಮಾಲೀಕರು ನಿಗದಿತ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಹೈನುಗಾರಿಕೆ ಪೆಟ್ಟು: ಜಿಲ್ಲೆಯಲ್ಲಿ ಕೃಷಿಯಷ್ಟೇ ಹೈನುಗಾರಿಕೆ ಅವಲಂಬನೆ ಹೆಚ್ಚಾಗಿದೆ. ರೈತರಿಗೆ ಪ್ರಮುಖ ಆರ್ಥಿಕ ಮೂಲವಾಗಿದೆ. ಆದರೆ ಈಗ ಲಾಭದಾಯಕ ಉದ್ದಿಮೆ ಎಂಬ ಆಶಯಕ್ಕೆ ಪೆಟ್ಟು ಬೀಳುತ್ತಿದೆ. 1200 ರೂ. ಬೆಲೆಯ 50 ಕೆಜಿ ತೂಕದ ಬೂಸಾದ ಚೀಲವನ್ನು 1350 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಹಸುಗಳನ್ನು ಸಾಕಿರುವವರಿಗೆ 50 ಕೆಜಿ ಚೀಲ ವಾರಕ್ಕೆ ಸಾಕಾಗುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ದುಬಾರಿ ಹಣ ಕೊಟ್ಟು ಪಶುಗಳಿಗೆ ಆಹಾರ ಒದಗಿಸುವುದು ಹೈನುಗಾರಿಕೆಯಲ್ಲಿ ತೊಡಗಿರುವವರನ್ನು ಸಂಕಷ್ಟಕ್ಕೆ ದೂಡಿದೆ.
ಕೃಷಿ, ತೋಟಗಾರಿಕೆ ಹಾಗೂ ಪಶು ಆಹಾರ ಪೂರೈಕೆ ಮಾಡುವುದಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಸರ್ಕಾರ ಘೋಷಿಸಿದ್ದರೂ ಆಹಾರ ಪದಾರ್ಥಗಳನ್ನು ಸಾಗಿಸಲು ಸರಕು ಸಾಗಣೆ ವಾಹನ ಸಿಗುತ್ತಿಲ್ಲ. ಕೆಲವು ವಾಹನ ಮಾಲೀಕರು ಮಾಮೂಲಿ ಬಾಡಿಗೆಗಿಂತ ಹೆಚ್ಚಿನ ಬಾಡಿಗೆ ಕೇಳುತ್ತಿದ್ದಾರೆ. ಇದರ ಜತೆಗೆ ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಸಿಗುವ ಕಾರ್ಮಿಕರೂ ಹೆಚ್ಚಿನ ಕೂಲಿ ಕೇಳುತ್ತಾರೆ. ಹೀಗಿರುವಾಗ ಸಾಗಾಣಿಕೆ ವೆಚ್ಚ ಹಾಗೂ ಕೂಲಿ ಹೆಚ್ಚಳದಿಂದಾಗಿ ಮೂಟೆಗೆ ಹೆಚ್ಚುವರಿಯಾಗಿ ಹಣ ಪಡೆಯಲಾಗುತ್ತಿದೆ ಎಂದು ಮಾರಾಟಗಾರರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ.
ಫಲಕ ಪ್ರದರ್ಶನ ಇಲ್ಲ:
ಯಾವ ಆಹಾರ ಪದಾರ್ಥಗಳ ಬೆಲೆ ಎಷ್ಟು, ಇಂತಿಷ್ಟು ಕೆಜಿ ಚೀಲಕ್ಕೆ ಇಂತಿಷ್ಟು ದರ ಎಂದು ಮಳಿಗೆಗಳ ಮುಂದೆ ಫಲಕ ಪ್ರದರ್ಶಿಸಬೇಕೆಂಬ ನಿಯಮವಿದ್ದರೂ ಬಹುತೇಕ ಮಳಿಗೆಯವರು ಇದನ್ನು ಗಾಳಿಗೆ ತೂರಿದ್ದಾರೆ.
ಭರವಸೆ ಈಡೇರಿಲ್ಲ: ಇತ್ತಿಚಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಜಿಲ್ಲೆಗೆ ಭೇಟಿ ನೀಡಿದ ವೇಳೆ ರೈತರ ನಿಯೋಗ ಸಚಿವರಲ್ಲಿ ಈ ಬಗ್ಗೆ ಮನವಿ ಮಾಡಿತ್ತು. ಪರಿಶೀಲನೆ ನಡೆಸುವ ಭರವಸೆ ಸಿಕ್ಕಿತ್ತು. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂಬುದು ರೈತರ ಆಕ್ರೋಶವಾಗಿದೆ.
ಎಂಆರ್‌ಪಿಗಿಂತ ಹೆಚ್ಚಿನ ಬೆಲೆಗೆ ಪಶು ಆಹಾರ ಮಾರಾಟ ಮಾಡುವ ಬಗ್ಗೆ ದೂರು ಬಂದಿದ್ದು, ಜಿಲ್ಲಾಧಿಕಾರಿ ಮೂಲಕ ಪ್ರಕಟಣೆ ಹೊರಡಿಸಲಾಗಿದೆ. ಇದು ಪುನಾರವರ್ತನೆಯಾದರೆ ಮತ್ತೊಮ್ಮೆ ಡಿಸಿ ಅವರ ಗಮನಕ್ಕೆ ತರಲಾಗುವುದು. ಡಾ. ಬಾಲಚಂದ್ರ, ಉಪನಿರ್ದೇಶಕ, ಪಶುಪಾಲನಾ ಮತ್ತು ಪಶು ಸಂಗೋಪನಾ ಇಲಾಖೆ ಲಾಕ್‌ಡೌನ್ ಸಂಕಷ್ಟದಿಂದ ರೈತರು ಮತ್ತಷ್ಟು ಸಂಕಷ್ಟ ಎದುರಿಸುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಎಂಆರ್‌ಪಿ ಬೆಲೆಗಿಂತ ಹೆಚ್ಚಿನ ಬೆಲೆಗೆ ಹಿಂಡಿ, ಬೂಸಾ ಮಾರುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮುನಿಯಪ್ಪ, ರೈತ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಕಾನೂನು ಬಾಹಿರ. ಇಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ರೈತರು ಇಂಥ ಅಕ್ರಮ ಕಂಡುಬಂದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಡಾ.ಜಗದೀಶ್ ಕೆ.ನಾಯಕ್, ಅಪರ ಜಿಲ್ಲಾಧಿಕಾರಿ