ಶ್ವಾನ ಹಾವಳಿ ನಿಯಂತ್ರಣಕ್ಕೆ ಮುಂದಾದ ಪಾಲಿಕೆ

5
Published on

ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೀದಿ ನಾಯಿಗಳ ಹಾವಳಿಗೆ ಶಾಶ್ವತ ಪರಿಹಾರ ನೀಡಲು ನಗರಪಾಲಿಕೆ ಮುಂದಾಗಿದೆ. ಜತೆಗೆ ಬಿಡಾಡಿ ಹಂದಿಗಳ ಹಾವಳಿ ನಿಯಂತ್ರಿಸಲೂ ತೀರ್ಮಾನಿಸಿದೆ.

ಬೀದಿನಾಯಿಗಳ ಸಂತಾನಶಕ್ತಿಹರಣ ಚಿಕಿತ್ಸೆ ಮಾಡಲು ನಗರದ ಹೊರವಲಯದಲ್ಲಿ ನಿರ್ಮಿಸುತ್ತಿರುವ ಬೀದಿ-ಸಾಕುನಾಯಿಗಳ ಆರೈಕೆ ಕೇಂದ್ರದ ಕಟ್ಟಡ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದ್ದು, ಮಾಸಾಂತ್ಯಕ್ಕೆ ಸೇವೆಗೆ ಲಭ್ಯವಾಗಲಿದೆ.

ಈ ಸಂಬಂಧ ಮೇಯರ್ ಶಿವಕುಮಾರ್ ನೇತೃತ್ವದಲ್ಲಿ ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ರಾಯನಕೆರೆ ಬಳಿ ನಿರ್ಮಿಸುತ್ತಿರುವ ಬೀದಿನಾಯಿಗಳ ಹಾಗೂ ಸಾಕುನಾಯಿಗಳ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಸಾಮಾನ್ಯ ಆಸ್ಪತ್ರೆ ಮಾದರಿಯಲ್ಲೇ ಬೀದಿನಾಯಿಗಳ ಆರೈಕೆ ಮತ್ತು ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಸೌಕರ್ಯವುಳ್ಳ ಆರೈಕೆ ಕೇಂದ್ರವಾಗಿದ್ದು, ಕಾಮಗಾರಿ ಪೂರ್ಣವಾದ ಮೇಲೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ.

ಸೆಪ್ಟೆಂಬರ್‌ನಲ್ಲಿ ಮೈಸೂರು ನಗರದಲ್ಲಿರುವ ಬೀದಿನಾಯಿಗಳ ಕಾರ್ಯಾಚರಣೆ ಮಾಡಿ ಈ ಕೇಂದ್ರಕ್ಕೆ ತಂದು ಆರೈಕೆ, ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಮತ್ತೆ ಅದೇ ಜಾಗಕ್ಕೆ ಬಿಡುವ ಕೆಲಸ ಮಾಡುವ ಕೆಲಸ ಆರಂಭವಾಗಲಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಕಾಟ ಹೆಚ್ಚಾಗುತ್ತಿರುವ ಬಗ್ಗೆ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಪಕ್ಷಾತೀತವಾಗಿ ಸದಸ್ಯರು ವಿಷಯ ಪ್ರಸ್ತಾಪಿಸಿದ್ದಲ್ಲದೆ, ಬೀದಿನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಒತ್ತಾಯಿಸಿದ್ದರು. ಅಲ್ಲದೆ, ಆರೈಕೆ ಕೇಂದ್ರವನ್ನು ತಕ್ಷಣವೇ ಸೇವೆಗೆ ಸಜ್ಜುಗೊಳಿಸುವಂತೆ ಒತ್ತಡ ಹೇರಿದ್ದರು. ಈ ಸಂಬಂಧ ಮೇಯರ್ ಶಿವಕುಮಾರ್ ನೇತೃತ್ವದ ನಿಯೋಗ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಿತು.

ಉಪ ಮೇಯರ್ ಡಾ.ಜಿ.ರೂಪಾ, ಆಡಳಿತ ಪಕ್ಷದ ನಾಯಕ ಮಾ.ವಿ.ರಾಮಪ್ರಸಾದ್, ಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಅಶ್ವಿನಿ ಅನಂತು, ಸಾತ್ವಿಕ್, ಕೆ.ವಿ.ಶ್ರೀಧರ್, ಎಸ್‌ಬಿಎಂ ಮಂಜು, ಸವಿತಾ, ಅಧೀಕ್ಷಕ ಇಂಜಿನಿಯರ್ ಕೆ.ಜೆ.ಸಿಂಧು, ವಲಯ ಸಹಾಯಕ ಆಯುಕ್ತ ಸತ್ಯಮೂರ್ತಿ, ಜೆ.ಇ. ರಂಜಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net