

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆಗುಂಡಿಗಳನ್ನು 15 ದಿನಗಳ ಒಳಗಾಗಿ ಮುಚ್ಚಿ ದುರಸ್ತಿ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದಲ್ಲಿರುವ ರಸ್ತೆಗುಂಡಿಗಳ ಕುರಿತು ಸಾಕಷ್ಟು ದೂರುಗಳು ಬರುತ್ತಿವೆ. ಈ ಬಗ್ಗೆ ತುರ್ತು ಗಮನ ಹರಿಸಬೇಕು. ಈಗಾಗಲೇ ರಸ್ತೆಗುಂಡಿ ಗಮನ ಎನ್ನುವ ಆ್ಯಪ್ ಮೂಲಕ ಸಾರ್ವಜನಿಕರು ರಸ್ತೆ ಗುಂಡಿಗಳ ಫೋಟೋ ತೆಗೆದು ಅಪ್ ಲೋಡ್ ಮಾಡುವ ವ್ಯವಸ್ಥೆ ಪರಿಚಯಿಸಲಾಗಿದೆ. ನಗರದ ಅನೇಕ ಕಡೆ ರಸ್ತೆ ಹಾಳಾಗಿರುವುದರ ಬಗ್ಗೆ ಇಲ್ಲಿಯೂ ಸಹ ದೂರುಗಳು ಬರುತ್ತಿವೆ. ಮಳೆಗಾಲದ ಕಾರಣಕ್ಕೂ ರಸ್ತೆಗುಂಡಿಗಳು ಉಂಟಾಗಿರಬಹುದು. ಇದರ ಬಗ್ಗೆಯೂ ಬಿಬಿಎಂಪಿ ಆಯುಕ್ತರು ಗಮನ ಹರಿಸಬೇಕು ಎಂದು ಡಿಸಿಎಂ ಭಾನುವಾರ ತಿಳಿಸಿದ್ದಾರೆ.
ಗಡುವಿನ ಬಳಿಕ ಪರಿಶೀಲನೆ:
ರಸ್ತೆಗುಂಡಿಗಳನ್ನು ಮುಚ್ಚಲು ಗಡುವು ನೀಡಿರುವ 15 ದಿನಗಳ ನಂತರ ಇಡೀ ಬೆಂಗಳೂರು ನಗರವನ್ನು ತಾವೇ ಸ್ವತಃ ಪ್ರದಕ್ಷಿಣೆ ಕೈಗೊಳ್ಳಲಿದ್ದೇನೆ. ಆಗ ಪ್ರತಿ ರಸ್ತೆಗಳನ್ನು ಪರಿಶೀಲನೆ ಮಾಡುತ್ತೇನೆ. ಅಷ್ಟರಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.