ಪರಿಸರ ಸ್ವಚ್ಛತೆಗೆ ಗ್ರಾಮಸ್ಥರ ಸಹಕಾರ ಅಗತ್ಯ

16 gkp. 01
ಬೆಕ್ಕೆಸೊಡ್ಲೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ತೀತಿರ ಧರ್ಮಜ ಉತ್ತಪ್ಪ, ತೀತಮಾಡ ಜಿ.ಪೂಣಚ್ಚ, ಮಾಚಿಮಾಡ ಗಣೇಶ್ ಉತ್ತಪ್ಪ ಮತ್ತಿತರರು ಇದ್ದರು.
Published on

ಗೋಣಿಕೊಪ್ಪ: ನಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳುವುದರೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಈ ಕಾರ್ಯ ಗ್ರಾಮದ ಸರ್ವ ನಾಗರಿಕರಿಂದ ನಡೆಯಬೇಕು ಹೊರತು ಸರ್ಕಾರ ಮಟ್ಟದಲ್ಲಿ ಸಾಧ್ಯವಿಲ್ಲ ಎಂದು ಶಾಸಕ ಎ.ಎಸ್.ಪೊನ್ನಣ್ಣ ತಿಳಿಸಿದರು.

ಬೆಕ್ಕೆಸೊಡ್ಲೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಗುರುವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೊಡಗಿಗೆ ಬರುವ ಪ್ರವಾಸಿಗರಿಂದಲೇ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬುತ್ತಿವೆ ಎಂಬ ಮಾತು ಸಮಂಜಸವಲ್ಲ. ಇಲ್ಲಿನ ನಾಗರಿಕರು ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವ ಪ್ರಯತ್ನಕ್ಕೆ ಮುಂದಾದಲ್ಲಿ ಕಸದ ಸಮಸ್ಯೆಗೆ ಪರಿಹಾರ ಸಿಗಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯನ್ನು ನಿಭಾಯಿಸುವಂತೆ ಕಿವಿಮಾತು ಹೇಳಿದರು.

ಇದೀಗ ತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ರಸ್ತೆ ಬದಿಯಲ್ಲಿಯೇ ತ್ಯಾಜ್ಯಗಳು ಎಲ್ಲೆಂದರಲ್ಲಿ ಬಿಸಾಕಿ ತೆರಳುತ್ತಿದ್ದಾರೆ. ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ಪರಿಸರ ಹಾಳಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಈ ನಿಟ್ಟಿನಲ್ಲಿ ನಮ್ಮ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿಕೊಡುವುದು ಪ್ರತಿ ನಾಗರಿಕನ ಕರ್ತವ್ಯವಾಗಿದೆ. ಹಾಗಾಗಿ ನಮ್ಮ ಜವಾಬ್ದಾರಿಯನ್ನು ಅರಿತು ಮನೆಯಲ್ಲಿಯೇ ಕಸ ವಿಂಗಡಣೆ ಮಾಡಿಕೊಳ್ಳುವ ಮೂಲಕ ಪರಿಸರವನ್ನು ಕಾಪಾಡೋಣ ಎಂದರು.

ಬೆಕ್ಕೆಸೊಡ್ಲೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸುಳ್ಳಿಮಾಡ ಡಿ.ಕಾವೇರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸುತ್ತಮುತ್ತಲಿನ ಗ್ರಾಮದ ಜನತೆಗೆ ಅನುಕೂಲವಾಗುವಂತೆ ಸ್ಪೋರ್ಟ್ಸ್ ಕ್ಲಬ್ ಕೆಲಸ ನಿರ್ವಹಿಸುತ್ತಿದೆ. ಕಳೆದ 25 ವರ್ಷಗಳಿಂದ ಉತ್ತಮ ಸೇವೆ ನೀಡುತ್ತಿದೆ. ಮಹಿಳೆಯರು ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಪುರುಷರು ಹಲವು ಕ್ರೀಡೆಗಳಲ್ಲಿ ಪ್ರತಿನಿತ್ಯ ಅಭ್ಯಾಸ ನಡೆಸುತ್ತಿದ್ದಾರೆ. ಇದೊಂದು ಮಾದರಿ ಕ್ಲಬ್ ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕ್ಲಬ್ ಉಪಾಧ್ಯಕ್ಷ ತೀತಮಾಡ ಜಿ.ಪೂಣಚ್ಚ, ಕಾರ್ಯದರ್ಶಿ ಮಾಚಿಮಾಡ ಗಣೇಶ್ ಉತ್ತಪ್ಪ, ನಿರ್ದೇಶಕರಾದ ಚಿರಿಯಪಂಡ ಬಿ.ಮೋಹನ್, ಚಿಂಡಮಾಡ ಪಿ.ಅಶೋಕ್, ಸುಳ್ಳಿಮಾಡ ಎಸ್.ನಂಜಪ್ಪ, ತಾಣಚ್ಚೀರ ಎಸ್.ಬೆಳ್ಳಿಯಪ್ಪ, ಮಾಚಿಮಾಡ ಎಂ.ಬೋಪಣ್ಣ, ಮಾಚಿಮಾಡ ಪಿ.ಸುರೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net