

ಕೊಪ್ಪ: ಷೇರುದಾರರು ತಮ್ಮ ಸಹಕಾರ ಸಂಘದಲ್ಲೇ ವ್ಯವಹಾರ ಮಾಡುವುದರಿಂದ ಸಂಸ್ಥೆ ಲಾಭಗಳಿಸುವ ಜತೆಗೆ ಷೇರುದಾರರಿಗೂ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಲ್ಯಾಂಪ್ಸ್ ಸಂಘದ ಅಧ್ಯಕ್ಷ ಡಿಎ್ಒ ಎಲ್.ನಂದೀಶ್ ಹೇಳಿದರು.
ಬಾಳಗಡಿಯ ಲ್ಯಾಂಪ್ಸ್ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾವು ಸಂಗ್ರಹಿಸುವ ಕಿರು ಅರಣ್ಯ ಉತ್ಪನ್ನಗಳನ್ನು ಲ್ಯಾಂಪ್ಸ್‌ಗೆ ಮಾರಾಟ ಮಾಡಬೇಕು. ಇದರಿಂದ ಸಂಘದ ಆದಾಯ ಹೆಚ್ಚುತ್ತದೆ. ಪ್ರಸಕ್ತ ಸಾಲಿನಲ್ಲಿ ಸಂಘ 6.38 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿ ವ್ಯವಹಾರ ಹೆಚ್ಚಿಸಬೇಕು ಎಂದು ಹೇಳಿದರು.
ಈಗಾಗಲೇ 2 ಕೋಟಿ ರೂ. ವೆಚ್ಚದಲ್ಲಿ ನೂತನ ವಾಣಿಜ್ಯ ಸಂಕೀರ್ಣ, ಗೋದಾಮು ಕಟ್ಟಡ, ಸೀಗೆಕಾಯಿ ಸಂಸ್ಕರಣ ಘಟಕ, ಜೇನು ಸಂಸ್ಕರಣ ಘಟಕದ ಉನ್ನತೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಶೃಂಗೇರಿಯ ನೆಮ್ಮಾರಿನಲ್ಲಿ 10 ಗುಂಟೆ ಜಾಗದಲ್ಲಿ ಗಿರಿಜನ ಸಾಂಸ್ಕೃತಿಕ ಭವನ, ಮಾರಾಟ ಮಳಿಗೆ ಮತ್ತು ಕೊಗ್ರೆಯಲ್ಲಿ 5 ಗುಂಟೆ ಜಾಗದಲ್ಲಿ ಗೋದಾಮು, ಮಾರಾಟ ಮಳಿಗೆ, ಸಿಬ್ಬಂದಿ ವಸತಿಗೃಹ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ಎಚ್.ಎಸ್.ಸುರೇಂದ್ರ ಮಾತನಾಡಿ, ಲ್ಯಾಂಪ್ಸ್ ಸಂಸ್ಥೆ ಕೊಪ್ಪ ಕೇಂದ್ರವಾಗಿಟ್ಟುಕೊಂಡು ಕೊಪ್ಪ , ಎನ್.ಆರ್.ಪುರ ಮತ್ತು ಶೃಂಗೇರಿ ತಾಲೂಕಿನಲ್ಲಿ ತನ್ನ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಸಂಘದಲ್ಲಿ 4,000ಕ್ಕೂ ಹೆಚ್ಚು ಸದಸ್ಯರಿದ್ದರೆ. ಕೊಪ್ಪದಲ್ಲಿ ವಾರ್ಷಿಕ ಮಹಾಸಭೆ ನಡೆಸುವುದರಿಂದ ದೂರದ ಎನ್.ಆರ್.ಪುರ ಮತ್ತು ಶೃಂಗೇರಿ ತಾಲೂಕಿನ ಸದಸ್ಯರಿಗೆ ಸಭೆಗೆ ಬರಲು ಅನಾನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಶೃಂಗೇರಿ ಮತ್ತು ಎನ್.ಆರ್.ಪುರದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆಗಳನ್ನು ನಡೆಸಿ ಕೊಪ್ಪದಲ್ಲಿ ಮಹಾಸಭೆ ನಡೆಸಿದರೆ ಹೆಚ್ಚಿನ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುತ್ತದೆ ಎಂದರು.