ಅಭಿವೃದ್ಧಿಗೆ ಹಳೇ ವಿದ್ಯಾರ್ಥಿಗಳ ಸಂಘದ ಸಹಕಾರ ಅಗತ್ಯ; ದಯಾನಂದ

MDK01
Published on

ಮಡಿಕೇರಿ: ಕಾಲೇಜಿನ ಅಭಿವೃದ್ಧಿ ಜತೆಗೆ ಸಂಘದ ಕಾರ್ಯ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಹಿರಿಯ ವಿದ್ಯಾರ್ಥಿಗಳ ಸಂಘದ ಗೌರವಾಧ್ಯಕ್ಷರು ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ ಸಲಹೆ ನೀಡಿದರು.


ವಿರಾಜಪೇಟೆಯ ಚಿಕ್ಕಪೇಟೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡದಲ್ಲಿ ಸೋಮವಾರ ನಡೆದ ಹಿರಿಯ ವಿದ್ಯಾರ್ಥಿಗಳ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಈಗಾಗಲೇ ಕಾಲೇಜು ಸ್ಥಾಪನೆಗೊಂಡು ಹದಿನಾರು ವರ್ಷಗಳು ಕಳೆದಿವೆ. ಈ ಮಧ್ಯೆ ಹಲವಾರು ಪ್ರಾಂಶುಪಾಲರು ಕಾಲೇಜಿನ ಜವಾಬ್ದಾರಿಯುತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡಿದ್ದಾರೆ. ಇದೀಗ ಆ ಜವಾಬ್ದಾರಿಯುತ ಸ್ಥಾನದಲ್ಲಿದೆ ನಾನಿದ್ದು, ಕಾಲೇಜಿನ ಅಭಿವೃದ್ಧಿಯ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಈಗಾಗಲೇ ಹಲವು ಅಭಿವೃದ್ಧಿ ಕಾರ್ಯಗಳು ಚಾಲ್ತಿಯಲ್ಲಿದೆ. ಮುಂದೆ ಮತ್ತಷ್ಟು ಅಭಿವೃಧ್ದಿ ಕಾರ್ಯಗಳು ನಡೆಯಲಿದ್ದು, ಹಳೇ ವಿದ್ಯಾರ್ಥಿಗಳ ಸಂಘದ ಸಹಕಾರ ಕೂಡ ಅಗತ್ಯ ಎಂದರು.


ಹಿರಿಯ ವಿದ್ಯಾರ್ಥಿಗಳ ಸಂಘದ ಸಂಚಾಲಕಿ ಡಾ.ಡಿ.ಕೆ.ಉಷಾ ಮಾತನಾಡಿ, ೨೦೦೭ ರಿಂದ ಇಲ್ಲಿಯ ತನಕ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಗಿಸಿ ಕಾಲೇಜಿನಿಂದ ಹೊರ ಹೋಗಿದ್ದು, ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿರಿಯ ವಿದ್ಯಾರ್ಥಿಗಳ ಸಂಘ ಇವರೆಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಾಲೇಜಿನಲ್ಲಿ ನಡೆಯುವ ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.


ಕಾಲೇಜಿನ ನ್ಯಾಕ್ ಸಮಿತಿಯ ಸಂಯೋಜಕ ಎಚ್.ಎಸ್.ವೇಣುಗೋಪಾಲ್ ಮಾತನಾಡಿ, ನಮ್ಮ ಕಾಲೇಜು ಸ್ಥಾಪನೆಗೊಂಡು ಕೆಲವೇ ವರ್ಷಗಳಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯಿಂದ ಬಿ ಗ್ರೇಡ್ ಪಡೆದಿದ್ದು ಹೆಮ್ಮೆಯ ವಿಚಾರ, ಇದೀಗ ಕಾಲೇಜು ಎರಡನೇ ಬಾರಿಗೆ ಮಾನ್ಯತೆ ಪ್ರಕ್ರಿಯೆಗೆ ಸಿದ್ಧವಾಗಿದೆ. ಜನವರಿ ತಿಂಗಳಲ್ಲಿ ಕಾಲೇಜಿಗೆ ನ್ಯಾಕ್ ತಂಡ ಆಗಮಿಸಲಿದ್ದು, ಈ ಸಂದರ್ಭ ಹಿರಿಯ ವಿದ್ಯಾರ್ಥಿಗಳು ಕೂಡ ಭಾಗವಹಿಸಬೇಕೆಂದು ತಿಳಿಸಿದರು.


ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಬೋಪಣ್ಣ ಮಾತನಾಡಿ, ಈಗಾಗಲೇ ಸಂಘದಿಂದ ಕಾಲೇಜಿಗೆ ಹಲವು ಕೊಡುಗೆ ನೀಡಲಾಗಿದೆ. ಕೋವಿಡ್ ಹಿನ್ನೆಲೆ ಸಂಘದ ಕಾರ್ಯ ಚಟುವಟಿಕೆಗಳನ್ನು ನಡೆಸಲು ಹಿನ್ನಡೆಯಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ಭರವಸೆ ನೀಡಿದರಲ್ಲದೆ, ಇತ್ತೀಚೆಗೆ ಕಾಲೇಜಿನಿಂದ ಹೊರ ಹೋಗಿರುವ ವಿದ್ಯಾರ್ಥಿಗಳು ಕೂಡ ಸಂಘದ ಸದಸ್ಯತ್ವ ಪಡೆದುಕೊಳ್ಳುವ ಮೂಲಕ ಸಂಘದ ಬೆಳವಣಿಗೆಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.


ಈ ಸಂದರ್ಭ ನ್ಯಾಕ್ ಸಮಿತಿ ಸಹ ಸಂಯೋಜಕ ಆರ್.ಮಂಜುನಾಥ, ಹಿರಿಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್.ಸುಮಾ, ಖಜಾಂಚಿ ಮೋಹನ್ ರಾಜ್, ನಿರ್ದೇಶಕರಾದ ದರ್ಶನ್ ಸೇರಿದಂತೆ ಹಿರಿಯ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net