

ಮೂಗೂರು: ನೀರು ನಿರ್ವಹಣೆ ಮತ್ತು ಸದ್ಬಳಕೆ ಮಾಡುವ ಮಹತ್ವಾಕಾಂಕ್ಷೆಯಿಂದ ಪ್ರಾರಂಭಿಸಿದ ನೀರು ಬಳಕೆದಾರರ ಸಹಕಾರ ಸಂಘಗಳು ಇನ್ನೂ ಹೆಚ್ಚು ಬಲವರ್ಧನೆಗೊಳ್ಳಲು ಎಲ್ಲರ ಸಹಕಾರ ಅವಶ್ಯ ಎಂದು ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ.ನಿಜಲಿಂಗಸ್ವಾಮಿ ಹೇಳಿದರು.
ಮೂಗೂರು ಸಮೀಪದ ಕುರುಬೂರು ಗ್ರಾಮದಲ್ಲಿ ಆಯೋಜಿಸಿದ್ದ 2024-25ನೇ ಸಾಲಿನ ಅಚ್ಚುಕಟ್ಟು ನೀರು ಬಳಕೆಗಾರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಳೆದ ಸಾಲಿನಲ್ಲಿ ಭೀಕರ ಕ್ಷಾಮ ತಲೆದೋರಿದ ಸಂದರ್ಭದಲ್ಲಿ ನೀರು ನಿರ್ವಹಣೆಯ ಮಹತ್ವ ಅರಿತು ಇಡೀ ರಾಷ್ಟ್ರದ ಸಹಕಾರ ತತ್ವದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳು ಸ್ಥಾಪಿತಗೊಂಡು ಕಳೆದ ಮೂರು ದಶಕದಿಂದ ಸಂಘಗಳು ನಿರೀಕ್ಷಿತ ಪ್ರಮಾಣದಲ್ಲಿ ಯಶ ಕಾಣದಿದ್ದರೂ ನೀರು ಬಳಕೆದಾರರ ಸಹಕಾರ ಸಂಘದ ಕಾರ್ಯ ಚಟುವಟಿಕೆ ಪ್ರಸಕ್ತ ಹೆಚ್ಚು ಪರಿಣಾಮಕಾರಿಯಾಗಿ ನಡೆಯಬೇಕಾದರೆ ವಿಶೇಷ ಕಾಳಜಿ ವಹಿಸಬೇಕಾಗಿದೆ ಎಂದರು.
2000ರಲ್ಲಿ ಕರ್ನಾಟಕ ಸರ್ಕಾರ ನೀರಾವರಿ ಕಾಯ್ದೆಯನ್ನು ತಿದ್ದುಪಡಿ ತಂದಿದ್ದು ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗೆ ಸಹಕಾರಿಯಾಗಿದೆ. ಆದರೆ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಗಮನಹರಿಸಿ ಈ ಕಾಯ್ದೆ ಅನುಷ್ಠಾನಗೊಂಡರೆ ನೀರು ಬಳಕೆದಾರರ ಸಹಕಾರ ಸಂಘಗಳು ರಾಜ್ಯದಲ್ಲಿ ಸಮರ್ಪಕವಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ನೀರು ಬಳಕೆದಾರರ ಸಹಕಾರ ಸಂಘಗಳಿಗೆ ವಾರ್ಷಿಕ ಕಾರ್ಯಾಧನವನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂವರೆಗೆ ನೀಡುವಂತೆ ಆದೇಶಿಸಬೇಕು. ನಿಗಮಗಳಲ್ಲಿ ಚಿಕ್ಕ ಕಾಲುವೆಗಳ ನಿರ್ವಹಣೆ ಜವಾಬ್ದಾರಿಯನ್ನು 5 ಲಕ್ಷ ರೂ.ಗಳವರೆಗೆ ನೀಡಿ ಸಂಘದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕೆ ಬಿ ರಾಜಪ್ಪ, ನಿರ್ದೇಶಕರಾದ ಕೆ ಸಿ ವೀರೇಶ್ ಶಾಂತರಾಜು ಶಿವಶಂಕರ ಅಶೋಕ್ ಎಂ ಶಾಂತ ಮಹೇಶ್ ಮಹದೇವಸ್ವಾಮಿ ರಾಜೇಂದ್ರ ಕುಮಾರ್ ಮಹದೇವಮ್ಮ ನಾಗಮಣಿ ಯೋಗೇಶ್ ಸಂಘದ ಸಿಇಒ ಕೆ ಎಸ್ ಶಿವಕುಮಾರ್ ಗ್ರಾಮದ ಮುಖಂಡರಾದ ನಟರಾಜು ಜಗದೀಶ್ ಪುಟ್ಟ ಮಾದಯ್ಯ ಶಿವಶಂಕರ್ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.