

ರಟ್ಟಿಹಳ್ಳಿ: ಮಠಗಳು ನಿರಂತರವಾಗಿ ಶಿಕ್ಷಣ, ದಾಸೋಹ ಸೇವೆ ಸೇರಿದಂತೆ ಅನೇಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದು, ಜನಸಾಮಾನ್ಯರು ತಾವು ಗಳಿಸಿದ್ದ ಆದಾಯದಲ್ಲಿ ಒಂದಷ್ಟು ಭಾಗವನ್ನು ದೇಣಿಗೆಯಾಗಿ ನೀಡಬೇಕು. ಇದರಿಂದ ಜೀವನದಲ್ಲಿ ನೆಮ್ಮದಿ, ಸಂತೋಷ ಮತ್ತು ಪುಣ್ಯ ಲಭಿಸುತ್ತದೆ ಎಂದು ಆನಂದಪುರ ಮುರುಘಾ ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದಲ್ಲಿ ಶ್ರೀ ಗುರು ಮೂಕಪ್ಪ ಶಿವಯೋಗಿಗಳ ಮಠದಲ್ಲಿ ಸೋಮವಾರ ಏರ್ಪಡಿಸಿದ್ದ ಲಿಂಗೈಕ್ಯ ಶ್ರೀ ವಿರೂಪಾಕ್ಷ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಭಕ್ತರು ಕಾಯಕ ನಿಷ್ಠೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಠಗಳ ರಕ್ಷಣೆಯಿಂದ ಸಮಾಜಕ್ಕೆ ಉತ್ತಮ ಭವಿಷ್ಯ ಇರುತ್ತದೆ. ಶ್ರೀ ವಿರೂಪಾಕ್ಷ ಸ್ವಾಮೀಜಿ ಈ ಭಾಗದ ಎಲ್ಲ ಭಕ್ತರ ಸಹಕಾರದಿಂದ ಮಠವನ್ನು ಎತ್ತರ ಮಟ್ಟದಲ್ಲಿ ಬೆಳೆಸಿದ್ದಾರೆ. ಮಠದ ಪೀಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮೀಜಿ ಅವರಿಗೆ ಭಕ್ತರು ಸಹಕಾರ ನೀಡಬೇಕು ಎಂದರು.
ಶಾಸಕ ಯು.ಬಿ. ಬಣಕಾರ ಮಾತನಾಡಿದರು.
ಸಂಸದ ಬಿ.ವೈ. ರಾಘವೇಂದ್ರ, ಕೆ.ಎಂ.ಎಫ್. ನಿರ್ದೇಶಕ ಹನುಮಂತಗೌಡ ಭರಮಣ್ಣನವರ, ಪುಷ್ಪಾ ಶಿವಕುಮಾರ, ರವಿಕುಮಾರ ಕೆ. ಮಡಿವಾಳರ, ಫಾಲಕ್ಷಗೌಡ್ರ ಪಾಟೀಲ, ಎಂ.ಎಂ. ಆರಾಧ್ಯಮಠ ಅವರು ಮಠದ ದಾಸೋಹ ಯೋಜನೆಗೆ ತಲಾ 1 ಲಕ್ಷ, ನೂರಾ ಒಂದು ರೂ. ಗಳನ್ನು ನೀಡಲಾಗುವುದು ಎಂದು ವಾಗ್ದಾನ ಮಾಡಿದರು.
ಶ್ರೀ ಮಹಾಂತ ಸ್ವಾಮೀಜಿ, ಶ್ರೀ ಕುಮಾರ ಸ್ವಾಮೀಜಿ, ಶ್ರೀ ಅಟವಿ ಶಿವಲಿಂಗ ಸ್ವಾಮೀಜಿ, ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಚನ್ನಬಸವ ಸ್ವಾಮೀಜಿ, ಶ್ರೀ ಶಿವಯೋಗೇಶ್ವರ ಸ್ವಾಮೀಜಿ, ಶ್ರೀ ಶಿವಬಸವ ಸ್ವಾಮೀಜಿ, ಶ್ರೀ ಮಹೇಶ್ವರ ಸ್ವಾಮೀಜಿ, ಶ್ರೀ ನಿಜಗುಣ ಸ್ವಾಮೀಜಿ, ಹಿರಿಯ ಶಾಂತಲಿಂಗ ಸ್ವಾಮೀಜಿ, ಶ್ರೀ ಚಂದ್ರಶೇಖರ ಸ್ವಾಮೀಜಿ, ಶ್ರೀ ಗುರುಲಿಂಗ ಸ್ವಾಮೀಜಿ, ಜಡೇ ಶ್ರೀಗಳು, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ, ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಹಳ್ಳಿ, ಸಾಹಿತಿ ಡಾ.ನಿಂಗಪ್ಪ ಚಳಗೇರಿ, ಕುಮಾರಗೌಡ್ರ ಪಾಟೀಲ, ಷಣ್ಮುಖಪ್ಪ ಚಳಗೇರಿ, ಪ್ರಭಯ್ಯ ವಿರಕ್ತಮಠ ಮಠದ ಭಕ್ತರು ಉಪಸ್ಥಿತರಿದ್ದರು.