

ಮಾನ್ವಿ: ಕಂದಾಯ ಇಲಾಖೆಯ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡುವುದರಿಂದ ರೈತರು, ಸಾರ್ವಜನಿಕರು ತಹಸಿಲ್ ಕಚೇರಿಗೆ ಅಲೆದಾಡುವುದು ತಪ್ಪಲಿದೆ ಎಂದು ಶಾಸಕ ಹಂಪಯ್ಯ ನಾಯಕ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಗುರುವಾರ ಭೂ ಸುರಕ್ಷಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಕಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಕಂಡ ಭೂ ದಾಖಲೆಗಳ ಡಿಜಿಟಲೀಕರಣದ ಕನಸು ನನಸಾಗುತ್ತಿದೆ. 1953-54 ರಿಂದ 2024 ರವರೆಗಿನ ಎಲ್ಲ ದಾಖಲೆಗಳು ಗಣಕೀಕರಣವಾಗಲಿದ್ದು, ಮೊಬೈಲ್‌ನಲ್ಲೇ ನೋಡಬಹುದಾಗಿದೆ. ಇಲ್ಲವೆ ಕಂದಾಯ ಇಲಾಖೆಗೆ ಬಂದು ದಾಖಲೆ ಕೇಳಿದರೆ ತಕ್ಷಣ ಸಿಗಲಿವೆ. ಈ ಹಿಂದೆ ಕಂದಾಯ ಇಲಾಖೆಯಲ್ಲಿ ದಾಖಲೆಗಳನ್ನು ಪಡೆಯಲು ವಾರಗಟ್ಟಲೆ ಅಲೆದಾಡಬೇಕಿತ್ತು. ಅದೀಗ ತಪ್ಪಲಿದೆ ಎಂದರು.
ತಹಸೀಲ್ದಾರ್ ರಾಜು ಪಿರಂಗಿ, ಉಪ ತಹಸೀಲ್ದಾರ್ ಅಬ್ದುಲ್ ವಾಹೀದ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಿ.ಕೆ. ಅಮರೇಶಪ್ಪ, ವೀರೇಶ ಇತರರಿದ್ದರು.