

ಮೈಸೂರು: ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ 35 ವರ್ಷದೊಳಗಿರುವ ಶೇ.85ರಷ್ಟು ಜನರ ಕೊಡುಗೆ ಅಗತ್ಯ ಎಂದು ವಿಟಿಯು ಡೀನ್ ಹಾಗೂ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ಹೇಳಿದರು.
ನಗರದ ತಿ.ನರಸೀಪುರ ರಸ್ತೆಯಲ್ಲಿರುವ ಮೈಸೂರು ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ (ಮೈಸೆಮ್) ಮಂಗಳವಾರ ಆಯೋಜಿಸಿದ್ದ ಪದವೀಧರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಅಮೆರಿಕ, ಚೀನಾ, ಜರ್ಮನಿ ನಂತರ ಭಾರತ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪ್ರತಿವರ್ಷ ಜಿಡಿಪಿ ಹೆಚ್ಚುತ್ತಲೇ ಇದೆ. ಈ ಸಾಲಿನಲ್ಲಿ ಭಾರತ ಕೂಡ ನಿಲ್ಲಬೇಕಿದೆ. ಹಾಗಾಗಿ ಭಾರತ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕಾದರೆ 35 ವರ್ಷದೊಳಗಿರುವ ಶೇ.85ರಷ್ಟು ಜನರ ಕೊಡುಗೆ ಹೆಚ್ಚಿದೆ ಎಂದರು
ಉದ್ಯೋಗ, ವಾಹನ, ಮನೆ ಕಟ್ಟುವುದಕ್ಕೆ ಸೀಮಿತವಾಗಬೇಡಿ. ದೇಶ ಸೇವೆ, ದೇಶದ ಉನ್ನತಿ ಹಾಗೂ ಕಠಿಣ ಪರಿಶ್ರಮದ ಕಡೆ ಗಮನ ಕೊಡಿ. ಮಾನವೀಯತೆ ಬೆಳೆಸಿಕೊಳ್ಳಿ. ಯಾವುದೇ ಸಂಸ್ಥೆಗಾದರೂ ಸಮಸ್ಯೆಯಾಗಬಲ್ಲವರು ಬೇಕಿಲ್ಲ. ಸಮಸ್ಯೆಗೆ ಪರಿಹಾರ ಹುಡುಕುವವರು ಬೇಕು. ಅದು ನೀವಾಗಿ ಎಂದರು.
ಥಾಮಸ್ ಆಲ್ಪಾ ಎಡಿಸನ್ ಬಲ್ಬ್ ಕಂಡು ಹಿಡಿಯ ಬೇಕಾದರೆ ಅದರಲ್ಲಿ ನೂರು ಸಲ ವಿಫಲನಾಗಿದ್ದ. ಸತತ ಪ್ರಯತ್ನದಿಂದ ಯಶಸ್ಸು ಸಾಧಿಸಿದ. ಆದ್ದರಿಂದ ಯಶಸ್ಸಿಗೆ ಯಾವುದೇ ಅಡ್ಡದಾರಿ ಹಿಡಿಯದೇ ಮೌಲ್ಯಗಳನ್ನು ಇಟ್ಟುಕೊಂಡು, ನಿಮ್ಮ ಬಗ್ಗೆ ಆತ್ಮವಿಶ್ವಾಸ ಹೊಂದಿ ಮುಂದೆ ಸಾಗಿ ಎಂದು ಸಲಹೆ ಮಾಡಿದರು.
19 ವರ್ಷಗಳ ಕಾಲ ಓದಿ ಪದವೀಧರರಾಗಿದ್ದೇವೆ ಎಂದು ಅಲ್ಲಿಗೆ ಓದು ನಿಲ್ಲಿಸಬೇಡಿ. ಪದವಿ ಬಳಿಕವೂ ಕಲಿಕೆ ಎಂಬುದು ನಿರಂತರವಾದುದು. ಅದು ಜೀವನದ ಒಂದು ಭಾಗ. ಸದಾ ಕಲಿಯುತ್ತಿರಬೇಕು ಎಂದರು.
ಎಲ್ಲೆಡೆ ಎಐ ಸದ್ದು ಮಾಡುತ್ತಿದೆ. ಅದಕ್ಕಾಗಿ ನಾವು ಕೂಡ ಅಪ್‌ಡೇಟ್ ಆಗಬೇಕಾಗಿದೆ. ಥಿಯರಿಗಿಂತ ಪ್ರಾಯೋಗಿಕವಾಗಿ ಕಲಿತ ಕೌಶಲ ಮುಖ್ಯ. ಆದ್ದರಿಂದ ಆ ಕಡೆಗೂ ಗಮನ ನೀಡಿದ್ದೇವೆ ಎಂದರು.
ಈ ನಿಟ್ಟಿನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 2025-26ನೇ ಸಾಲಿನ ಹೊಸ ಪಠ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ಕೌಶಲಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಹೇಳಿದರು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ವೈದ್ಯಕೀಯ ಪದವೀಧರರು ಆರೋಗ್ಯ ಕ್ಷೇತ್ರಕ್ಕೆ ಸೀಮಿತವಾದರೆ ಇಂಜಿನಿಯರಿಂಗ್ ಪದವೀಧರರು ಭೂಮಿಯಿಂದ ಬಾಹ್ಯಾಕಾಶದವರೆಗೆ ಎಲ್ಲ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದರು
ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್, ಮೆಕಾನಿಕಲ್, ಕಂಪ್ಯೂಟರ್ ಸೈನ್ಸ್, ಇನ್‌ಫರ್ಮೇಷನ್ ಟೆಕ್ನಾಲಜಿ, ಇಂಡಸ್ಟ್ರಿಯಲ್ ಪ್ರೊಡಕ್ಷನ್ ಸೇರಿದಂತೆ ಇಂಜಿನಿಯರಿಂಗ್ ಸೇರಿದಂತೆ ಎಲ್ಲ ಕೋರ್ಸುಗಳು ದೇಶದ ವಿಜ್ಞಾನ-ತಂತ್ರಜ್ಞಾನ, ಮೂಲಸೌಕರ್ಯ, ಕೈಗಾರಿಕಾ ಕ್ಷೇತ್ರಕ್ಕೆ ಬಹುಮುಖ್ಯವಾದವು. ದೇಶದ ಅಭಿವೃದ್ಧಿಗೆ ಪೂರಕ ಎಂದು ಹೇಳಿದರು.
ಇಂಜಿನಿಯರಿಂಗ್ ಪದವೀಧರರು ಐಎಎಸ್, ಐಪಿಎಸ್, ರಾಜಕಾರಣ, ಕ್ರೀಡೆ, ಸಿನಿಮಾ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲೂ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಕರ್ನಾಟಕದ ಗಡಿ ದಾಟಿ ದೇಶ-ವಿದೇಶಗಳಲ್ಲಿ ನೌಕರಿ ಮಾಡುತ್ತಾ, ಕನ್ನಡ ಸಂಘಟನೆಗಳನ್ನು ಕಟ್ಟಿ, ಕನ್ನಡ ಭಾಷೆಯ ಬೆಳವಣಿಗೆಗೂ ಕಾರಣಕರ್ತರಾಗಿದ್ದಾರೆ ಎಂದರು.
ಜೆವಿಎಸ್‌ಎಸ್‌ಎಂ ಸಂಸ್ಥೆಯ ಅಧ್ಯಕ್ಷ ಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿಯಾದ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಕೆ.ಎನ್. ಪುಟ್ಟಬುದ್ಧಿ, ಕಾರ್ಯದರ್ಶಿ ಪ್ರೊ.ಮಂಜುನಾಥ್, ಖಜಾಂಚಿ ಪೂರ್ಣಿಮಾ ಬಿ. ಕಿರಣ್, ಪ್ರಾಂಶುಪಾಲ ಡಾ.ಟಿ.ಎಸ್. ಮಂಜುನಾಥ್ ಇತರರು ಇದ್ದರು.
2025ನೇ ಸಾಲಿನಲ್ಲಿ ಪದವಿ ಪೂರೈಸಿದ 179 ವಿದ್ಯಾರ್ಥಿಗಳಿ ಪ್ರಮಾಣಪತ್ರ ವಿತರಿಸಲಾಯಿತು. ಅಲ್ಲದೆ ಅತಿ ಹೆಚ್ಚು ಅಂಕ ಪಡೆದವರಿಗೆ ನಗದು ಬಹುಮಾನ ನೀಡಿ ಪುರಸ್ಕರಿಸಲಾಯಿತು.