

ಮೈಸೂರು: ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಯುವಕರಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಕಿಚ್ಚು ಹಚ್ಚಲು ಕಾರಣಕರ್ತರಾದವರೇ ಭಗತ್ ಸಿಂಗ್ ಎಂದು ಮಾಜಿ ಸೈನಿಕರೂ ಆದ ಸಬ್ ಇನ್ಸ್‌ಪೆಕ್ಟರ್ ಮಹೇಶ್ ಬಣ್ಣಿಸಿದರು.
ಭಗತ್ ಸಿಂಗ್, ರಾಜ್ ಗುರು, ಸುಖದೇವ್ ಅವರ ಹುತಾತ್ಮರ ದಿನಾಚರಣೆ ಅಂಗವಾಗಿ ಪ್ರಜ್ಞಾವಂತ ನಾಗರಿಕ ವೇದಿಕೆಯಿಂದ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ಜೈ ಹಿಂದ್ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಉಳಿವಿಗಾಗಿ ಶಾಂತಿಯುತವಾಗಿ ಒಂದು ತಂಡ ಇದ್ದರೆ, ಕ್ರಾಂತಿಕಾರಿಯಾಗಿ ಒಂದು ತಂಡ ಬ್ರಿಟಿಷರ ವಿರುದ್ಧ ಹೋರಾಟವನ್ನು ಮಾಡಿದ್ದರಿಂದ ಸ್ವಾತಂತ್ರ್ಯ ಪಡೆಯಲಾಯಿತು. ಈ ನಿಟ್ಟಿನಲ್ಲಿ ಬ್ರಿಟಿಷರು ಭಾರತೀಯರ ಮಾರಣಹೋಮವನ್ನು ಧಿಕ್ಕರಿಸಿ ಭಗತ್ ಸಿಂಗ್ ಅವರ ಕುಟುಂಬ ಪಣ ತೊಟ್ಟಿತು ಎಂದರು.
ಜಲಿಯಾನ್ ವಾಲಿಬಾಗ್ ಘಟನೆ ಬಳಿಕ ಅತಿ ಹೆಚ್ಚು ಕ್ರಾಂತಿ ಭಾವನೆ ಮೂಡಿತ್ತು. ಪಾರ್ಲಿಮೆಂಟ್‌ನ ಕೆಂಪು ಕೋಟೆಯ ಮೇಲೆ ಬಾಂಬ್ ದಾಳಿ ಮಾಡಿ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ, ಇಂಕ್ವೀಲಾಬ್ ಜಿಂದಾಬಾದ್ ಎಂಬ ಘೊಷಣೆ ಎಂಬ ವಾಕ್ಯದಲ್ಲಿ ಹೋರಾಟ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಕೇವಲ 23 ವರ್ಷದಲ್ಲಿ ಮಾರ್ಚ್23 ದಿನದಂತು ನೇಣುಗಂಭ ಏರುವ ಮೂಲಕ ಬಲಿದಾನ ಗೈದರು ಎಂದು ಹೇಳಿದರು.
ನಗರಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್ ಮಾತನಾಡಿ, ದೇಶದ ರಕ್ಷಣೆಗೆ ಮಳೆ, ಗಾಳಿ, ಚಳಿ, ಬಿಸಿಲನ್ನು ಲೆಕ್ಕಿಸದೆ ನಮ್ಮನ್ನು ರಕ್ಷಣೆ ಮಾಡುವರು ನಮ್ಮ ಸೈನಿಕರು. ಅವರ ಸೇವೆ ಎಷ್ಟೇ ವರ್ಣಿಸಿದರೂ ಸಾಲದು. ನಮ್ಮ ಹಿರಿಯರು, ಕ್ರಾಂತಿಕಾರಿಗಳು, ಸೈನಿಕರ ಪ್ರೇರಣೆಯಿಂದ ಯುವ ಜನಾಂಗ ದೇಶದ ರಕ್ಷಣೆಗಾಗಿ ಸೇನೆಗೆ ಸೇರ್ಪಡೆಯಾಗಲು ಮುಂದಾಗಬೇಕು ಎಂದು ಕೋರಿದರು.
ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮುಖಂಡ ಕೆ.ಜೆ. ರಮೇಶ್, ಜಗದೀಶ್, ಅಪೂರ್ವ ಸುರೇಶ್, ಅಜಯ್ ಶಾಸ್ತ್ರಿ, ವಿಘ್ನೇಶ್ವರ ಭಟ್, ನಾರಾಯಣ ಶರ್ಮ, ನಾಗಮಣಿ, ಸುದರ್ಶನ್, ಚರಣ್, ಸುಕನ್ಯಾ, ರಾಮ್, ದಯಾನಂದ್, ವಿಜಯ್ ಕುಮಾರ್, ಬೈರತಿ ಲಿಂಗರಾಜು, ರಮೇಶ್ ಇತರರು ಇದ್ದರು.