ಸ್ಮಾರಕಗಳ ಸಂರಕ್ಷಣೆಗೆ ಜಿಲ್ಲಾ ಜನತೆಯ ಕೊಡುಗೆ ಮಹತ್ವದ್ದು

rorty karyakrama
Published on

ಮಡಿಕೇರಿ: ಕೊಡಗಿನಲ್ಲಿ ನೂರಾರು ಪ್ರಾಚೀನ ಸ್ಮಾರಕಗಳಿದ್ದು ಇವುಗಳ ಸಂರಕ್ಷಣೆ ನಿಟ್ಟಿನಲ್ಲಿ ಸಾರ್ವಜನಿಕರೂ ಅಗತ್ಯ ಸಹಕಾರ ನೀಡಬೇಕೆಂದು ಜಿಲ್ಲಾ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕ್ಯೂರೇಟರ್ ಬಿ.ಪಿ.ರೇಖಾ ಮನವಿ ಮಾಡಿದರು.


ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ಗುರುವಾರ ಆಯೋಜಿತ ಪ್ರಾಚೀನ ಸ್ಮಾರಕಗಳ ಮಹತ್ವದ ಕುರಿತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಕೊಡಗು ಜಿಲ್ಲೆಯಲ್ಲಿ ಈವರೆಗೆ ದೊರಕಿದ ಅನೇಕ ಪ್ರಾಚೀನ ಮಹತ್ವದ ಸ್ಮಾರಕಗಳ ಪ್ರಾತ್ಯಕ್ಷಿಕೆಯೊಂದಿಗೆ ಉಪನ್ಯಾಸ ನೀಡಿದರು.


ಪ್ರಾಚೀನ ಸ್ಮಾರಕಗಳು ನಮ್ಮ ದೇಶದ ಭವ್ಯ ಇತಿಹಾಸದ ಮಹತ್ವವನ್ನು ಸಾರಿಹೇಳುತ್ತವೆ. ಇಂಥ ಸ್ಮಾರಕಗಳ ಸಂರಕ್ಷಣೆ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂರಕ್ಷಣೆಗೆ ಸಾರ್ವಜನಿಕರೂ ಸಹಕಾರ ನೀಡುವಂತೆ ರೇಖಾ ಮನವಿ ಮಾಡಿದರು.


ಕೊಡಗು ಜಿಲ್ಲೆಯಲ್ಲಿಯೂ ಐತಿಹಾಸಿಕ ಸ್ಮಾರಕಗಳನ್ನು ದತ್ತು ಪಡೆದು ನಿರ್ವಹಿಸಲು ಸಂಘಸಂಸ್ಥೆಗಳು ಸಿದ್ದರಿದ್ದರೆ ಅದಕ್ಕೆ ಕೂಡ ಅವಕಾಶ ಇದೆ. ವೀರಗಲ್ಲು, ಮಾಸ್ತಿಗಲ್ಲು ಸೇರಿದಂತೆ ಪ್ರಾಚೀನ ದೇವಾಲಯಗಳು, ಶಿಲೆಗಳು ಕಂಡುಬಂದಲ್ಲಿ ಅವುಗಳ ಬಗ್ಗೆ ಮಾಹಿತಿಯನ್ನು ಕೊಡಗು ಜಿಲ್ಲಾ ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಗೆ ನೀಡುವಂತೆ ರೇಖಾ ವಿನಂತಿಸಿದರು.


ಕಾರ್ಯಕ್ರಮದಲ್ಲಿ ರೋಟರಿ ವುಡ್ಸ್ ಅಧ್ಯಕ್ಷ ಕಿಗ್ಗಾಲು ಹರೀಶ್, ಕಾರ್ಯದರ್ಶಿ ಕಿರಣ್ ಕುಂದರ್, ಸಹಾಯಕ ಗವರ್ನರ್ ದೇವಣಿರ ಕಿರಣ್, ರೋಟರಿ ವುಡ್ಸ್ ಮಾಜಿ ಅಧ್ಯಕ್ಷ ಎಸ್.ಎಸ್.ಸಂಪತ್ ಕುಮಾರ್, ವಸಂತ್ ಕುಮಾರ್ ಸೇರಿದಂತೆ ರೋಟರಿ ಪ್ರಮುಖರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net