

ಕವಿತಾಳ: ಇಲ್ಲಿನ ಮುಂಡರಗಿ ಮಠವು ಅಪಾರ ಭಕ್ತರನ್ನು ಹೊಂದಿದ್ದು, ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಐಜಿಪಿ ಡಾ.ಡಿ.ಸಿ. ರಾಜಪ್ಪ ಹೇಳಿದರು.
ಪಟ್ಟಣದ ಮುಂಡರಗಿ ಮಠದ ಸಂಗೀತ ಸುಧಾಕರ ಮಹಾಂತಸ್ವಾಮಿ 22ನೇ ಪುಣ್ಯಸ್ಮರಣೆ ನಿಮಿತ್ತ ಮಹಾಂತಮ್ಮ ಮುಂಡರಗಿ ಮಠ ಪ್ರತಿಷ್ಠಾನದಿಂದ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಹಾಂತ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. 22 ವರ್ಷದಿಂದ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ, ಮಹಾಂತಸ್ವಾಮಿ ಪುಣ್ಯಸ್ಮರಣೆ ನೆನಪಿನಲ್ಲಿ ನಾಡಿನ ವಿವಿಧ ಕ್ಷೇತ್ರದ ಕಲಾವಿದರನ್ನು ಗೌರವಿಸುವ ಮೂಲಕ ಕಲಾಭಿಮಾನ ಮೆರೆಯುತ್ತಿದೆ.
ಸಾಹಿತ್ಯದಲ್ಲಿ ನಾನು ಮಾಡಿದ ಕೃಷಿ ಪರಿಗಣಿಸಿ ಪ್ರಶಸ್ತಿ ನೀಡಿರುವುದು ಮರೆಯುವಂತಿಲ್ಲ ಎಂದರು. ಪ್ರತಿಷ್ಠಾನದ ಅಧ್ಯಕ್ಷ ಎಂ.ಗಿರಿಜಾಪತಿ ಮಾತನಾಡಿದರು. ಬಳಿಕ ರಂಗಭೂಮಿ ಕಲಾವಿದ ಸಿದ್ದಲಿಂಗಯ್ಯ ರಾಯಚೂರು ಹಾಗೂ ಬುರ‌್ರಕಥಾ ಅಯ್ಯಮ್ಮ ಯಡವಲ್ ಅವರಿಗೆ ಮಹಾಂತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಲಾಯಿತು.
ಪ್ರಮುಖರಾದ ಕರಿಂಸಾಬ್, ಮರಿಸ್ವಾಮಿ ಬಳ್ಳಾರಿ, ಶಾಶ್ವತಯ್ಯಸ್ವಾಮಿ ಮಕ್ಕುಂದಿಮಠ, ಶೇಖರಪ್ಪ ಹಟ್ಟಿ ಇತರರಿದ್ದರು. ಕಾರ್ಯಕ್ರಮದ ನಂತರ ಆರೋಗ್ಯ ತಪಾಸಣೆ ಉಚಿತ ಶಿಬಿರ ನಡೆಯಿತು.