

ಮಳವಳ್ಳಿ: ಮಳವಳ್ಳಿ ಕ್ಷೇತ್ರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿರುವ ಕೊಡುಗೆ ಅನನ್ಯ. ಅದನ್ನು ಎಂದಿಗೂ ಮತದಾರರು ಮರೆಯುವಂತಿಲ್ಲವೆಂದು ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.
ಜ.18-19 ರಂದು ತಾಲೂಕಿನ ಶಿವನಸಮುದ್ರ(ಭ್ಲಫ್)ದಲ್ಲಿ ನಡೆಯುವ ಗಗನಚುಕ್ಕಿ ಜಲಪಾತೋತ್ಸವ ಸಂಬಂಧವಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಹಿಂದಿನ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಹತ್ತು ವರ್ಷಗಳು ಶಾಸಕ-ಸಚಿವರಾಗಿ ಕ್ಷೇತ್ರದಲ್ಲಿ ಎರಡು ಸಾವಿರ ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಿರುವುದಾಗಿ ಬೀಗುತ್ತಿದ್ದಾರೆ. ಆದರೆ ನಾನು 2006 ರಲ್ಲಿ ಮೊದಲು ಶಾಸಕನಾಗಿದ್ದ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳನ್ನು ಹೊರತುಪಡಿಸಿ ಪ್ರಸ್ತುತ ಶಾಸಕನಾದ ಒಂದು ವರ್ಷದಲ್ಲೇ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಕುಮಾರಸ್ವಾಮಿ ಕ್ಷೇತ್ರಕ್ಕೆ 1,300 ಕೋಟಿ ರೂ. ವಿಶೇಷ ಅನುದಾನ ನೀಡಿದ್ದಾರೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರನ್ನು ಮಾಜಿ ಶಾಸಕ ಎತ್ತಿಕಟ್ಟುವ ಮೂಲಕ ಹೊಸ ಅನುದಾನ ತಾರದೆ ಮಾಜಿ ಶಾಸಕ ಬಿಡುಗಡೆ ಮಾಡಿಸಿದ್ದ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆಂದು ಅಪಪ್ರಚಾರ ಮಾಡಿಸುತ್ತಿದ್ದಾರೆಂದು ಕಿಡಿಕಾರಿದರು.
ಈಗಾಗಲೇ ನೂರಾರು ಕೋಟಿ ರೂ. ನೀರಾವರಿ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಾಗಿದ್ದು, ಇವುಗಳ ಬಗ್ಗೆ ಸೂಕ್ತ ದಾಖಲೆ ನೀಡುತ್ತೇನೆಂದು ಸವಾಲು ಹಾಕಿದರು.
ಜ.18-19 ರಂದು ವಿಶ್ವ ವಿಖ್ಯಾತ ಗಗನಚುಕ್ಕಿ ಜಲಪಾತೋತ್ಸವವನ್ನು ಪ್ರವಾಸೋದ್ಯಮ ಹಾಗೂ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದೆ. ಪ್ರಕೃತಿಯ ಮೈಸಿರಿಯನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಆಗಮಿಸಲಿದ್ದು, ಈ ಕಾರ್ಯಕ್ರಮಕ್ಕೆ ತಾಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ಪಕ್ಷದ ಕಾರ್ಯಕರ್ತರು ಸಹಕರಿಸುವಂತೆ ಮನವಿ ಮಾಡಿದರು.
ಪುರಸಭೆ ಸದಸ್ಯರಾದ ಸಿದ್ದರಾಜು, ನಂದಕುಮಾರ್, ನೂರುಲ್ಲಾ, ಪ್ರಮೀಳಾ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಮಲ್ಲೇಗೌಡ, ಮುಖಂಡರಾದ ಎಂ.ಎಚ್.ಕೆಂಪಯ್ಯ, ಗುರುಸ್ವಾಮಿ ಇದ್ದರು.