ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರ ಕೊಡುಗೆ ಅಪಾರ

17bnk1
ಬಣಕಲ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಣಕಲ್ ಪ್ರೌಢಶಾಲೆ ನಿವೃತ್ತ ಶಿಕ್ಷಕ ಪಿ.ವಾಸುದೇವ್ ಅವರನ್ನು ಸನ್ಮಾನಿಸಲಾಯಿತು. ಝೈದ್ ಪೈಜಿ ಮತ್ತಿತರರು ಇದ್ದರು.
Published on

ಬಣಕಲ್: ಶಿಕ್ಷಣ ಕ್ಷೇತ್ರಕ್ಕೆ ಶಿಕ್ಷಕರ ಕೊಡುಗೆ ಅಪಾರವಾಗಿದೆ ಎಂದು ಖಲಂದರಿಯ ಆಶ್ರಮದ ಧರ್ಮಗುರು ಸಿನಾನ್ ಪೈಝೀ ಹೇಳಿದರು.
ಚಕ್ಕಮಕ್ಕಿಯ ಖಲಂದರಿಯ ಆಶ್ರಮದಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕ ಪಾಠ ಪ್ರವಚನ ಮಾತ್ರ ಮಾಡುವುದಿಲ್ಲ. ಅವರೊಬ್ಬ ಉತ್ತಮ ಮಾರ್ಗದರ್ಶಕ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು. ಶಿಕ್ಷಣವಿಲ್ಲದೇ ಯಾವುದೇ ವ್ಯಕ್ತಿ ವಿಕಸನಗೊಳ್ಳುವುದಿಲ್ಲ ಎಂದರು.
ಧರ್ಮಗುರು ಮಜೀದ್ ೈಝೀ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ಮಕ್ಕಳನ್ನು ಬಾಲ್ಯದಲ್ಲಿಯೇ ತಿದ್ದಿ ಉತ್ತಮ ವ್ಯಕ್ತಿಗಳಾಗಿ ಮಾಡುವಲ್ಲಿ ಶಿಕ್ಷಕರ ಸಂಸ್ಕಾರ ಪ್ರಮುಖ ಪಾತ್ರವಹಿಸುತ್ತದೆ. ಶಿಕ್ಷಕರನ್ನು ಗೌರವಿಸುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ ಎಂದರು.
ಮುಖ್ಯಶಿಕ್ಷಕ ಪಿ.ವಾಸುದೇವ್, ಮಕ್ಕಳು ಶಿಕ್ಷಣವನ್ನು ಯಶಸ್ವಿಯಾಗಿ ಪೂರೈಸಿ ಸಮಾಜದಲ್ಲಿ ಉತ್ತಮ ಸ್ಥಾನಮಾನ ಪಡೆದಾಗ ನಾವು ವಿದ್ಯಾರ್ಥಿಗಳಿಗೆ ಕೊಟ್ಟ ಶಿಕ್ಷಣ ಸಾರ್ಥಕವಾಗುತ್ತಿದೆ. 30 ವರ್ಷದ ಹಿಂದಿನ ವಿದ್ಯಾರ್ಥಿಗಳಿಗೂ ಇಂದಿನ ವಿದ್ಯಾರ್ಥಿಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇಂದಿನ ಸ್ಥಿತಿ ಗಮನಿಸಿದಾಗ ಮೊಬೈಲ್ ಬಳಕೆ ಹಾಗೂ ಮಾದಕ ವಸ್ತುಗಳ ವ್ಯಸನದಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಇದು ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತದೋ ಎಂಬ ಆತಂಕ ಎದುರಾಗಿದೆ. ಚಿಕ್ಕ ಮಕ್ಕಳನ್ನು ದುಡಿಮೆಗೆ ತಳ್ಳದೇ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.
ಬಣಕಲ್ ಪ್ರೌಢಶಾಲೆ ಮುಖ್ಯಶಿಕ್ಷಕ ಜಿ.ಎಚ್ ಶ್ರೀನಿವಾಸ್ ಹಾಗೂ ನಿವೃತ್ತ ಶಿಕ್ಷಕ ಪಿ.ವಾಸುದೇವ್ ಅವರನ್ನು ಸನ್ಮಾನಿಸಲಾಯಿತು. ಧರ್ಮಗುರು ಝೈದ್ ಪೈಜಿ ಹಾಗೂ ಆಶ್ರಮದ ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net