ದೇಶಕ್ಕೆ ಸೈನಿಕರ ಕೊಡುಗೆ ಅಪಾರ

The contribution of soldiers to the country is immense.
ಹುನಗುಂದ ಬಸವ ಮಂಟಪದಲ್ಲಿ ಶನಿವಾರ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ 26ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಸಮಾರಂಭ ಹಾಗೂ ಹುತಾತ್ಮ ಯೋಧರಿಗೆ ಗೌರವ ನಮನ ಸಮಾರಂಭದಲ್ಲಿ ಸೈನಿಕರ ಮಕ್ಕಳಿಗೆ ಸನ್ಮಾನಿಸಲಾಯಿತು. ಗುರುಮಹಾಂತ ಸ್ವಾಮೀಜಿ, ಬಾಲಪ್ಪ ಕಿರಸೂರ, ನಾಗಪ್ಪ ಆಲೂರ ಇದ್ದರು.
Published on

ಹುನಗುಂದ: ಕಾರ್ಗಿಲ್ ವಿಜಯೋತ್ಸವ ನಮ್ಮ ಸೈನಿಕರು ದೇಶಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ ಎಂದು ಚಿತ್ತರಗಿಯ ಸಂಸ್ಥಾನ ಮಠ ಇಳಕಲ್ಲದ ಗುರುಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ, ವೀರನಾರಿಯರ ಹಾಗೂ ಹಾಲಿ ಸೈನಿಕರ ಸಂಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ 26 ನೇ ಕಾರ್ಗಿಲ್ ವಿಜಯೋತ್ಸವ, ಆಪರೇಷನ್ ಸಿಂಧೂರ ಯಶಸ್ವಿ ಸಮಾರಂಭ ಹಾಗೂ ಹುತಾತ್ಮ ಯೋಧರಿಗೆ ಗೌರವ ನಮನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೈನಿಕರು ತಮ್ಮ ಪ್ರಾಣದ ಹಂಗು ತೊರೆದು ಹೋರಾಟ ಮಾಡುತ್ತಾರೆ. ಕಾರ್ಗಿಲ್ ಪ್ರದೇಶ ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಗಿಲ್ ಪ್ರದೇಶ ಮರಳಿ ಪಡೆಯದಿದ್ದರೇ ಇಂದು ಕಾಶ್ಮೀರ ಸಹ ಕಳೆದುಕೊಳ್ಳುವಂತೆ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ದೇಶ ಸೇವೆಗೆ ತ್ಯಾಗಮಹಿಗಳಾದ ಸೈನಿಕರು ಸನ್ಯಾಸಿಗಿಂತಲೂ ಸರ್ವ ಶ್ರೇಷ್ಠರು. ಮಾಜಿ ಸೈನಿಕರಿಗೆ ಗೌರವ ಮತ್ತು ವಿಶೇಷ ಆದ್ಯತೆ ಕೊಡುವುದರ ಜೊತೆಗೆ ವೀರನಾರಿಯರಿಗೆ ನೀಡಬೇಕು ಎಂದರು.

ದೈಹಿಕ ನಿರ್ದೇಶಕ, ಲೆಪ್ಠಿನೆಂಟ್ ಎಸ್.ಬಿ.ಚಳಗೇರಿ ಮಾತನಾಡಿ, ಭಾರತೀಯ ಸೈನಿಕರ ಆತ್ಮವಿಶ್ವಾಸ ಬಹುದೊಡ್ಡದು. ಬಣ್ಣ ಬಳಿದುಕೊಂಡವರೆಲ್ಲಾ ಹೀರೋಗಳಲ್ಲ, ಈ ರಾಷ್ಟ್ರ ಸುಭದ್ರವಾಗಿಡಲು ಗಡಿಯಲ್ಲಿ ನಿತ್ಯ ವೈರಿಗಳ ಜೊತೆಗೆ ಹೋರಾಟ ಮಾಡುವವರು ನಿಜವಾದ ಹಿರೋಗಳು. ಭಾರತೀಯ ಸೈನಿಕರು ಜೀವನದಲ್ಲಿ ಎಂದು ಸೋಲನ್ನು ಒಪ್ಪಿಕೊಳ್ಳಲಾರದೇ ಸದಾ ಗೆಲುವನ್ನೇ ಬಯಸುವರಾಗಿದ್ದಾರೆ. ಈ ಪವಿತ್ರವಾಗಿರುವಂತ ದೇಶ ಸೇವೆಗೆ ಅಗ್ನಿವೀರಾಗಿ ನಮ್ಮ ಮಹಾವಿದ್ಯಾಲಯದ 20 ಎನ್‌ಸಿಸಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ವಿಶೇಷ ಎಂದು ಬಣ್ಣಿಸಿದರು.

ಬೆಳಗ್ಗೆ 9 ಗಂಟೆಯಿಂದ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರ ಬಸವ ಮಂಟಪದಿಂದ ಪಟ್ಟಣದ ಪ್ರಮುಖ ಬೀದಿಯಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾದ ನಾಲ್ವರು ಮಾಜಿ ಯೋಧರಿಗೆ , ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸೈನಿಕರ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಾಲಪ್ಪ ಕಿರಸೂರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಸಂಘದ ಗೌರವ ಅಧ್ಯಕ್ಷ ಅರ್ಜುನ ಕೋರಿ, ಅಧ್ಯಕ್ಷ ಗದಿಗೆಪ್ಪ ಅರಿಕೇರಿ, ಗೌರವಾಧ್ಯಕ್ಷ ಶಿವಾನಂದ ನಿರವಾಲಿ, ತಾಲೂಕು ಉಪಾಧ್ಯಕ್ಷ ಶಿವಪ್ಪ ಯಡಹಳ್ಳಿ, ಅರೆಸೇನಾ ಪಡೆಯ ತಾಲೂಕಾಧ್ಯಕ್ಷ ಪ್ರಭುಲಿಂಗ ಕಾಳಹಸ್ತಿಮಠ, ವೀರ ನಾರಿಯರ ಜಿಲ್ಲಾ ಅಧ್ಯಕ್ಷೆ ಗಂಗಮ್ಮ ಬಾರಕೇರ, ತಾಲೂಕಾಧ್ಯಕ್ಷೆ, ಜಯಶ್ರೀ ಹಿರೇಮಠ, ಪ್ರಧಾನ ಕಾರ್ಯದರ್ಶಿ ವಿಜಯ ಧಳವಾಯಿ ಇದ್ದರು. ಗೀತಾ ತಾರಿವಾಳ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net