ಸಿದ್ಧಗಂಗಾ ಮಠದ ಕೊಡುಗೆ ಅಪಾರ

ಸಿದ್ಧಗಂಗಾ ಮಠದ ಕೊಡುಗೆ ಅಪಾರ
Published on

ಸೋಮವಾರಪೇಟೆ: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಿದ್ಧಗಂಗಾ ಮಠದ ಕೊಡುಗೆ ಅಪಾರವಾದುದು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ತಿಲೊತ್ತಮೆ ನಂದಕುಮಾರ್ ಹೇಳಿದರು.

ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗು ವೀರಶೈವ ಸಮಾಜದ ಆಶ್ರಯದಲ್ಲಿ ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶಿವಕುಮಾರ ಸ್ವಾಮೀಜಿ ಜಯಂತಿ ಹಾಗೂ ಗುರುವಂದನಾ ಸಮಾರಂಭದಲ್ಲಿ ಮಾತನಾಡಿದರು.

ತ್ರಿವಿಧ ದಾಸೋಹಕ್ಕೆ ಹೆಸರುವಾಸಿಯಾಗಿರುವ ಸಿದ್ಧಗಂಗಾ ಮಠ ಶೈಕ್ಷಣಿಕ ಕ್ಷೇತ್ರದಲ್ಲೂ ಸಾಧನೆ ಮಾಡಿದೆ. ಜಾತಿ, ಧರ್ಮ, ಭೇದವಿಲ್ಲದೆ ಉಚಿತ ಶಿಕ್ಷಣ ನೀಡುತ್ತಿದೆ ಎಂದು ಹೇಳಿದರು. ಪೂಜ್ಯ ಶಿವಕುಮಾರ ಸ್ವಾಮೀಜಿ ಹಳ್ಳಿ, ಹಳ್ಳಿ ತಿರುಗಿ ಭಿಕ್ಷೆ ಎತ್ತಿ ಕಟ್ಟಿದ ಮಠ ಇಂದು ಹೆಮ್ಮರವಾಗಿ ಬೆಳೆದು ಸಮಾಜದ ಆಸ್ತಿಯಾಗಿದೆ ಎಂದು ಹೇಳಿದರು.

ಮಕ್ಕಳಲ್ಲಿಯೇ ದೇವರನ್ನು ಕಾಣುತ್ತಿದ್ದ ಶಿವಕುಮಾರ ಸ್ವಾಮೀಜಿ ಮಕ್ಕಳ ಮಧ್ಯಾಹ್ನದ ಊಟದ ನಂತರವೇ ತನ್ನ ಸಾವಿನ ಸುದ್ದಿ ತಿಳಿಸಬೇಕು ಎಂದು ಹೇಳಿದ್ದು ಅವರಿಗೆ ಮಕ್ಕಳ ಮೇಲಿದ್ದ ಮಮತೆಯನ್ನು ತೋರಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್, ವೀರಶೈವ ಸಮಾಜದ ಶೆಟ್ರು ಮೃತ್ಯುಂಜಯ, ಕಾರ್ಯದರ್ಶಿ ನಾಗರಾಜ್, ಅಕ್ಕನ ಬಳಗದ ಅಧ್ಯಕ್ಷೆ ಚಂದ್ರಕಲಾ, ವೇದಿಕೆಯ ಜಿಲ್ಲಾಧ್ಯಕ್ಷ ಉಷಾರಾಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net