

ಮಾನ್ವಿ: ದಾಸ ಪರಂಪರೆಯಲ್ಲಿ ಶ್ಯಾಮಸುಂದರ ವಿಠ್ಠಲ ದಾಸರು ವಿಶೇಷರಾಗಿದ್ದು, ದಾಸ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದು ಸಾಹಿತಿ ಡಾ.ವಿಜಯರಾವ್ ಕುಪನೇಶಿ ಹೇಳಿದರು.
ಇದನ್ನೂ ಓದಿ:ಅಲ್ಲಮಪ್ರಭು ಆರಾಧನಾ ಮಹೋತ್ಸವ ಸಂಪನ್ನ
ಪಟ್ಟಣದ ರಾಯರ ಮಠದಲ್ಲಿ ಶ್ಯಾಮಸುಂದರ ದಾಸರ ಸೇವಾ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ಯಾಮಸುಂದರ ವಿಠ್ಠಲ ದಾಸರ 68ನೇ ಆರಾಧನಾ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಜನಿಸಿದ ಶ್ಯಾಮಸುಂದರ ವಿಠ್ಠಲ ದಾಸರು, ಜಗನ್ನಾಥ ದಾಸರು ರಚಿಸಿದ ಹರಿಕಥಾಮೃತಸಾರದ ಪ್ರತಿಯೊಂದು ಶ್ಲೋಕಕ್ಕೂ 14 ಅರ್ಥಗಳನ್ನು ಹೇಳುವ ಮೂಲಕ ಹಾರಿಕಥಾಮೃತ ಸಾರದ ವಿಶ್ವಕೋಶ ಎಂದು ಬಿರುದು ಪಡೆದಿದ್ದಾರೆ. ಕನ್ನಡ ಭಾಷೆಯಲ್ಲಿ 250 ಹೆಚ್ಚು ಕೀರ್ತನೆಗಳು, 4 ಸುಳಾದಿಗಳು, 16 ಉಗಭೋಗಗಳನ್ನು ರಚಿಸಿದ್ದಾರೆ. ಅತ್ಯಂಜರಿಗೂ ಕೂಡ ವೈಷ್ಣವ ದೀಕ್ಷೆ ನೀಡಿ ಹರಿದಾಸರನ್ನಾಗಿ ಮಾಡಿದ ಕಿರ್ತಿ ಶ್ಯಾಮಸುಂದರ ವಿಠ್ಠಲ ದಾಸರಿಗೆ ಸಲ್ಲುತ್ತದೆ ಎಂದರು.
ಪಟ್ಟಣದ ಜಗನ್ನಾಥ ದಾಸರ ಸನ್ನಿಧಾನದಿಂದ ರಾಘವೇಂದ್ರ ಸ್ವಾಮಿಗಳ ಮಠದವರೆಗೆ ದಾಸಾರ್ಯ ಭಜನಾ ಮಂಡಳಿ ಹಾಗೂ ನಾರಾಯಣ ತಿರ್ಥರ ಮಹಿಳಾ ಭಜನ ಮಂಡಳಿಯಿಂದ ಗ್ರಾಮ ಪ್ರದಕ್ಷಿಣೆ ಹಾಕಲಾಯಿತು. ಶ್ಯಾಮಸುಂದರ ವಿಠ್ಠಲ ದಾಸರ ಮೊಮ್ಮಕ್ಕಳಾದ ಶಾಮಾಚಾರ್, ಜಗನ್ನಾಥಾಚಾರ್, ಹರನ್ನಳ್ಳಿ ವೆಂಕೋಬರಾವ್, ನರಸಿಂಹಾಚಾರ್, ಟಿ.ಭೀಮಸೇನರಾವ್, ಗಿರಿರಾಜ ಪಾಟೀಲ್ ಜಾನೇಕಲ್, ಪಂಡಿತ ಪವನಾಚಾರ್ಯ ಮಾದಿನೂರು ಇದ್ದರು.