

ಸೋಮವಾರಪೇಟೆ: ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಕೊಡಗಿನ ಸಾಹಿತಿಗಳು, ಕವಿಗಳ ಕೊಡುಗೆ ಅಪಾರವಾದದು ಎಂದು ಡಾ.ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕ ಶಬರಿ ಗಿರೀಶ್ ಹೇಳಿದರು.
ಕೊಡಗು ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತೋಳೂರು ಶೆಟ್ಟಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ದಿ.ಗಂಗಮ್ಮ ರಾಜಪ್ಪ ಜ್ಞಾಪಕಾರ್ಥ ದತ್ತಿನಿಧಿ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯದಲ್ಲಿ ಕೊಡಗು ವಿಷಯದ ಕುರಿತು ಉಪನ್ಯಾಸ ನೀಡಿದರು.
ಪ್ರಕೃತಿಯ ಮಡಿಲಲ್ಲಿರುವ ಕೊಡಗಿನಲ್ಲಿ ವೈವಿಧ್ಯಮಯ ಭಾಷೆ, ಸಂಸ್ಕೃತಿ ಇದೆ. ಕೊಡವ, ಅರೆಭಾಷೆ ಸೇರಿದಂತೆ ಇತರ ಭಾಷೆಗಳನ್ನಾಡುವ ಜನರೂ ಇದ್ದಾರೆ. ಇಂತಹ ಭಾಷೆಯನ್ನು ಆಡುವ ಜನರು ಕನ್ನಡ ಸಾಹಿತ್ಯ ಬೆಳೆವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿ, ಕನ್ನಡದ ಶ್ರೀಮಂತಿಕೆಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ ಎಂದು ಹೇಳಿದರು.
ಕ.ಸಾ.ಪ. ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ ಮಾತನಾಡಿ, 9ನೇ ಶತಮಾನದಲ್ಲಿ ಕೊಡಗಿನಲ್ಲಿ ರಾಜ್ಯಭಾರ ಮಾಡಿದ್ದ ಗಂಗ-ಕೊಂಗಾಳ್ವರು ನಂತರದ ಹಾಲೇರಿ ರಾಜವಂಶಸ್ಥರು ಹಳಕನ್ನಡದಲ್ಲಿ ಶಾಸನಗಳನ್ನು ರಚಿಸುವ ಮೂಲಕ ಕನ್ನಡದ ಬೆಳೆವಣಿಗೆಗೆ ಅಡಿಪಾಯ ಹಾಕಿಕೊಟ್ಟಿದ್ದಾರೆ. 1789ರಿಂದ 1809ವರೆಗೆ ರಾಜ್ಯಭಾರ ಮಾಡಿದ ದೊಡ್ಡವೀರರಾಜೇಂದ್ರ ಅವರು ರಾಜೇಂದ್ರನಾಮೆ ಎಂಬ ದಾಖಲೆಯನ್ನು ಕನ್ನಡದಲ್ಲಿ ಬರೆಸಿದ್ದರು. ಕೊಡಗಿನ ಆದಿಕವಿ ಎಂದು ಕರೆಸಿಕೊಂಡ ಹರಿದಾಸ ಅಪ್ಪಚ್ಚ ಕವಿ, ಕಥೆಗಾರ್ತಿ ಕೊಡಗಿನ ಗೌರಮ್ಮ, ಶಿಕ್ಷಕ ಎಸ್.ಆರ್.ನಾರಾಯಣರಾವ್ ಮುಂತಾದವರು ಕನ್ನಡ ಬೆಳೆವಣಿಗೆಗೆ ತಮ್ಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ಕಸಾಪ ಜಿಲ್ಲಾ ಸಮಿತಿ ಸಹ ಕಾರ್ಯದರ್ಶಿ ಜಲಜಾ ಶೇಖರ್, ಪದಾಧಿಕಾರಿಗಳಾದ ಜೆ.ಸಿ.ಶೇಖರ್, ಸಿ.ಎಸ್.ನಾಗರಾಜು, ಜ್ಯೋತಿ ಅರುಣ್, ಕೆ.ಪಿ.ದಿನೇಶ್, ಜಗದೀಶ್, ಜಮೀರ್, ಸುರೇಶ್ ಇದ್ದರು.