ನಾಲ್ವಡಿ ಕೃಷ್ಣರಾಜ ಒಡೆಯರ್​ ಕೊಡುಗೆ ಅನನ್ಯ

05 06 2025_BNG_RURAL_PAGE_2
ಹೊಸಕೋಟೆ ತಾಲೂಕು ಉಪ್ಪಾರಹಳ್ಳಿ ಎಂವಿಕೆ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್​ನಿಂದ ಹಮ್ಮಿಕೊಂಡಿರುವ ನಾಲ್ವಡಿ ಕೃಷ್ಣರಾಜ ಒಡೆಯರ್​ ಜಯಂತಿಯಲ್ಲಿ ಕಸಾಪ ಅಧ್ಯಕ್ಷ ರಾಜ ಆರ್ಟ್ಸ್​ ಮುನಿರಾಜು ಸೇರಿ ಕಸಾಪ ಪದಾಧಿಕಾರಿಗಳು ಒಡೆಯರ್​ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾ ಸಂಟನಾ ಕಾರ್ಯದರ್ಶಿ ನಾಗರಾಜ್​, ಗೌರವ ಕಾರ್ಯದರ್ಶಿ ಬಚ್ಚೇಗೌಡ, ತಾಲೂಕು ಸಂಟನಾ ಕಾರ್ಯದರ್ಶಿ ಮಾಕನಹಳ್ಳಿ ಮಂಜುನಾಥ್​ ಇದ್ದರು.
Published on

ಹೊಸಕೋಟೆ : ದೂರದೃಷ್ಟಿ ಚಿಂತನೆಯ ನಾಲ್ವಡಿ ಕೃಷ್ಣರಾಜ ಒಡೆಯರ್​ ಮೈಸೂರು ಸಂಸ್ಥಾನದ ಮಹಾರಾಜರಾಗಿ ಕನ್ನಡ ಭಾಷೆಗೆ ಹಾಗೂ ಕನ್ನಡಿಗರಿಗೆ ನೀಡಿದ ಕೊಡುಗೆ ಅಪಾರ ಎಂದು ಕನ್ನಡ ಸಾಹಿತ್ಯ ಪರಿಷತ್​ ತಾಲೂಕು ಅಧ್ಯಕ್ಷ ರಾಜಆರ್ಟ್ಸ್​ ಮುನಿರಾಜು ತಿಳಿಸಿದರು.

ಕಸಬಾ ಹೋಬಳಿಯ ಉಪ್ಪಾರಹಳ್ಳಿಯಲ್ಲಿ ಕಸಾಪದಿಂದ ಎಂವಿಕೆ ಇಂಟರ್​ ನ್ಯಾಷನಲ್​ ಶಾಲೆಯಲ್ಲಿ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರ 141 ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು, ಮೈಸೂರು ಸಂಸ್ಥಾನ ಇದ್ದಾಗಲೇ ರಾಜ್ಯಕ್ಕೆ ಅಣೆಕಟ್ಟು, ಶಿಕ್ಷಣ ಸಂಸ್ಥೆಗಳು, ವಿಮಾನ ನಿರ್ಮಾಣ ಟಕ ಸೇರಿ 64 ಕ್ಕೂ ಹೆಚ್ಚು ಬೃಹತ್​ ಸಂಸ್ಥೆಗಳನ್ನು ನಿರ್ಮಾಣ ಮಾಡಿ ಕನ್ನಡಿಗರಿಗೆ ಪ್ರಾದಾನ್ಯತೆ ನೀಡಿದ್ದರು.

ಕನ್ನಡದ ಸಿರಿ, ಕಲೆ, ಸಾಹಿತ್ಯವನ್ನು ಮುಂದಿನ ಪೀಳಿಗೆಗೆ ಒದಗಿಸಲು ಕನ್ನಡ ಸಾಹಿತ್ಯ ಪರಿಷತ್ತನ್ನು ನಿರ್ಮಿಸಿ ಕನ್ನಡದ ಪ್ರೇಮ ಮೊಳಗಿಸಿದವರು. ಸರಳತೆಯ ಮೇರು ವ್ಯಕ್ತಿತ್ವ ಹೊಂದಿದ ಒಡೆಯರ್​ ಅವರು ದೈವಾಂಶ ಸಂಭೂತರು ಎಂದರೆ ತಪ್ಪಾಗಲಾರದು. ವಿಶ್ವದಲ್ಲಿ ಬೀದಿದೀಪ ಪರಿಕಲ್ಪನೆಯನ್ನು ಬೆಂಗಳೂರಿನಲ್ಲಿ ಸಾಕಾರಗೊಳಿಸಿದ ಅವರು ತಮ್ಮ ಅಧಿಕಾರವನ್ನು ಎಂದಿಗೂ ದುರ್ಬಳಕೆ ಮಾಡಿಕೊಳ್ಳದೆ ಪ್ರಾಂತ್ಯವಾರು ನಾಯಕರನ್ನು ಒಟ್ಟಿಗೆ ಕರೆಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿ ಪ್ರಜಾ ಪ್ರಭುತ್ವದ ಚಾಪು ಮೂಡಿಸಿದರು ಎಂದರು.

ಜಿಪಂ ಮಾಜಿ ಅಧ್ಯಕ್ಷ ಸಿ.ಮುನಿಯಪ್ಪ ಮಾತನಾಡಿ, ರಾಜ್ಯದ ಪ್ರತಿಯೊಂದು ಶಾಲೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್​ ಅವರ ಜಯಂತಿಗೆ ಸರ್ಕಾರ ಒತ್ತು ನೀಡಬೇಕಿದೆ. ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡುವ ಮೂಲಕ ಮೇರು ವ್ಯಕ್ತಿತ್ವದ ಮೂರ್ತಿಗೆ ಗೌರವ ಸಲ್ಲಿಸುವ ಕೆಲಸ ಆಗಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಡೆಯರ್​ ಅವರಂತ ಮಹಾನ್​ ವ್ಯಕ್ತಿಯ ಆದರ್ಶಗಳನ್ನು ಸಾರುವ ಕೆಲಸ ಮಾಡಬೇಕು ಎಂದರು.

ಎಂವಿಕೆ ಇಂಟರ್​ ನ್ಯಾಷನಲ್​ ಶಾಲೆಯ ಕಾರ್ಯದರ್ಶಿ ಕಲಾವತಿ, ನಿರ್ದೇಶಕ ದೇವರಾಜ್​, ನಿವೃತ್ತ ಸೈನಿಕ ಸೂಲಿಬೆಲೆ ಮುನಿರಾಜು, ಮುಖಂಡರಾದ ವರದಾಪುರ ಆನಂದ್​, ಬಿಎಂಟಿಸಿ ಮುನಿಸ್ವಾಮಿ ಇದ್ದರು.

ನಟ ಕಮಲ್​ಹಾಸನ್​ ಹೇಳಿಕೆ ಸರಿಯಲ್ಲ : ಪ್ರಸ್ತುತ ಕನ್ನಡ ಉಳಿವಿಗಾಗಿ ಹೋರಾಟ ಅನಿವಾರ್ಯವಾಗಿದೆ. ಸಾವಿರಾರು ವರ್ಷ ಇತಿಹಾಸ ಹೊಂದಿರುವ ಕನ್ನಡವು ತಮಿಳಿನಿಂದ ಹುಟ್ಟಿದೆ ಎಂದು ನಟ ಕಮಲ್​ಹಾಸನ್​ ಹೇಳಿಕೆ ಕೊಟ್ಟಿರುವುದು ಸರಿಯಲ್ಲ. ಅವರು ಕ್ಷಮೆ ಕೇಳದಿರುವುದಕ್ಕೆ ಹೈಕೋರ್ಟ್​ ಕೂಡ ಛೀಮಾರಿ ಹಾಕಿದೆ. ಕನ್ನಡ ಶಾಲೆಗಳಿಗೆ ಕನ್ನಡಿಗರ ಮಕ್ಕಳೆ ಬರುತ್ತಿಲ್ಲ. ಉತ್ತರ ಭಾರತದ ರಾಜ್ಯಗಳಿಂದ ಕೆಲಸಕ್ಕೆ ಬಂದವರ ಮಕ್ಕಳು ಕನ್ನಡ ಶಾಲೆಗೆ ಬರುತ್ತಿದ್ದಾರೆ. ಇದರಿಂದ ಕನ್ನಡ ಭಾಷೆ ಉಳಿಸುವುದು ದೊಡ್ಡ ಹೋರಾಟವಾಗಿದೆ ಎಂದು ಕಸಾಪ ಗೌರವ ಕಾರ್ಯದರ್ಶಿ ಬಚ್ಚೇಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net