

ಹಾಸನ: ಮಠಗಳ ಗುರಿ ಕೇವಲ ಆಧ್ಯಾತ್ಮಿಕ ಕಡೆಗೆ ಮಾತ್ರವಲ್ಲ, ಮನುಷ್ಯನ ಸರ್ವಾಂಗೀಣ ವಿಕಾಸದತ್ತ ಉಪದೇಶ ಮಾಡುತ್ತಿದ್ದು, ಸ್ವಾಮೀಜಿ ಅವರ ದೂರದೃಷ್ಟಿ, ಪರಿಶ್ರಮ ಮತ್ತು ಸತತ ಪ್ರಯತ್ನದಿಂದ ಅನೇಕ ವಿದ್ಯಾಸಂಸ್ಥೆ ಸ್ಥಾಪಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಪುಷ್ಪಗಿರಿ ಆರೋಗ್ಯ ವಿಜ್ಞಾನ ಸಂಸ್ಥೆಗಳು ಹಾಗೂ ಶ್ರೀ ಪುಷ್ಪಗಿರಿ ಇನ್ಫಿನೆಕ್ಸಾ ಸಾಫ್ಟ್‌ವೇರ್ ಕಂಪನಿ ಉದ್ಘಾಟಿಸಿ ಮಾತನಾಡಿದರು.
ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಅವರು ವೈದ್ಯಕೀಯ ಶಿಕ್ಷಣದಲ್ಲಿ ಅನೇಕ ಸಂಸ್ಥೆ ಹಾಗೂ ಇನ್‌ಸ್ಟಿಟ್ಯೂಟ್ ಆರಂಭಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯಿಂದ ಜನ ಕಲ್ಯಾಣಕ್ಕಾಗಿ ಸಂಸ್ಥೆ ಆರಂಭಿಸುತ್ತಿರುವುದರಿಂದ ಅನುಕೂಲವಾಗಲಿದೆ. ರಾಜ್ಯದಲ್ಲಿ ಕಾಯಕ ದಾಸೋಹ ಸಂಸ್ಕೃತಿಯನ್ನು ಬಸವಣ್ಣನವರು ಮಾರ್ಗದರ್ಶನ ಮಾಡಿದ್ದು, ರಾಜ್ಯದ ಬೆಳವಣಿಗೆಯಲ್ಲಿ ಮಠಗಳ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.
ಆದಿಚುಂಚನಗಿರಿ ಮಠ ಕೂಡ ಅನೇಕ ವಿದ್ಯಾಸಂಸ್ಥೆ ಹುಟ್ಟು ಹಾಕಿದ್ದು, ರಾಜ್ಯದಲ್ಲಿ ಅನ್ನ ದಾಸೋಹ, ವಿದ್ಯಾ ದಾಸೋಹ ಮಾಡುತ್ತಿರುವುದರಿಂದ ಕರ್ನಾಟಕ ಪ್ರಗತಿಪರವಾದ ರಾಜ್ಯ ಆಗುತ್ತಿದೆ. ಮಠಗಳು ಸಮಾಜಮುಖಿಯಾಗಿ ಎಲ್ಲ ಸಮಾಜವನ್ನು ಅಪ್ಪಿಕೊಂಡು ಪ್ರೀತಿ, ವಿಶ್ವಾಸದ ಸಂಬಂಧ ಇಟ್ಟುಕೊಂಡು ಕೆಲಸ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಸರಿಯಾದ ಮಾರ್ಗದರ್ಶನ ಸಿಗಬೇಕೆಂದರೇ ಒಳ್ಳೆ ಮಠಗಳು, ಉತ್ತಮ ಸ್ವಾಮೀಜಿಗಳು ಇರಬೇಕು. ನಮಗೆ ಸರಿಯಾದ ಮಾರ್ಗದರ್ಶನ ಮಾಡಲು ಮಠಗಳ ಅವಶ್ಯಕತೆ ಇರುತ್ತದೆ. ನಿಸ್ವಾರ್ಥಭಾವದಿಂದ ಸೇವೆ ಮಾಡಿದರೆ ಎಲ್ಲರೂ ಸಹಕಾರ ಕೊಡುತ್ತಾರೆ. ಪ್ರಾಮಾಣಿಕವಾಗಿ ಪುಷ್ಪಗಿರಿ ಮಠ ಮಾಡುವ ಒಳ್ಳೆಯ ಕೆಲಸಗಳಿಗೆ ಇಲಾಖೆಯಿಂದ ಸಹಕಾರ ಕೊಡುತ್ತೇವೆ ಎಂದು ಹೇಳಿದರು.
ಹಾಸನ ಉತ್ತಮ ಜಿಲ್ಲೆಯಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಸೇವೆ ಮಾಡುವ ಉತ್ತಮ ಗುಣ ಹೊಂದಿದ್ದಾರೆ. ಅಲ್ಲದೆ ಮಠಗಳೂ ಜನರನ್ನು ಸನ್ಮಾರ್ಗದಲ್ಲಿ ಸಾಗುವಂತೆ ಪ್ರೇರಣೆ ಕೆಲಸ ಮಾಡುತ್ತಿದೆ. ಎಲ್ಲರನ್ನೂ ಪ್ರೀತಿಸುವ, ಸನ್ಮಾರ್ಗದಲ್ಲಿ ಕೊಂಡೊಯ್ಯುವ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಸ್ವಾಮೀಜಿ ಮಾತನಾಡಿ, 10 ವರ್ಷದಿಂದ ಮಠದಿಂದ ಒಂದೊಂದೇ ಹೆಜ್ಜೆಯಾಗಿ ಪ್ರಸ್ತುತ 15 ಸಂಸ್ಥೆ ಪ್ರಾರಂಭಿಸಿದ್ದೇವೆ. ಈ ಮೂಲಕ ನಿರಂತರವಾಗಿ ಸಮಾಜ ಸೇವೆಯಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಮಾತನಾಡಿದರು. ಮಹಾನಗರ ಪಾಲಿಕೆ ಮೇಯರ್ ಗಿರೀಶ್ ಚನ್ನವೀರಪ್ಪ, ಹುಡಾ ಅಧ್ಯಕ್ಷ ಪಟೇಲ್ ಶಿವಪ್ಪ, ಕುಮಾರಸ್ವಾಮಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ನವೀಲೆ ಪರಮೇಶ್, ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಸೆನೆಟ್ ಸದಸ್ಯ ಶ್ರೀನಿವಾಸ್, ವಿರೂಪಾಕ್ಷ, ಗುರುಪ್ರಸಾದ್, ಅಶೋಕ್ ಕುಮಾರ್, ಹಿರಣಯ್ಯ, ಡಾ. ಉಮೇಶ್, ಡಾ. ಮಂಜುನಾಥ್, ಶಿವರಾಮ್, ಸಿ.ಎಸ್. ನಾಗೇಶ್, ಅಜಿತ್, ಮಮತಾ ಪಟೇಲ್ ಇತರರಿದ್ದರು.