ದೇಶಕ್ಕೆ ಮಠಮಾನ್ಯಗಳ ಕೊಡುಗೆ ಅಪಾರ

amgd 18-1
ಅಮೀನಗಡದ ಪ್ರಭುಶಂಕರೇಶ್ವರ ಅನುಭವ ಮಂಟಪದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವ ಪುರಾಣ ಉದ್ಘಾಟನಾ ಕಾರ್ಯಕ್ರಮವನ್ನು ಮುಂಡರಗಿಯ ಡಾ. ನಾಡೋಜ ಅನ್ನದಾನೇಶ್ವರ ಸ್ವಾಮೀಜಿ ಉದ್ಘಾಟಿಸಿದರು. ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಪ್ಪಿನಬೆಟಿಗೇರಿ ವಿರಕ್ತಮಠ ವಿರೂಪಾಕ್ಷ ಮಹಾಸ್ವಾಮಿಗಳು ಇತರರಿದ್ದರು.
Published on

ಅಮೀನಗಡ: ರಾಜ್ಯದಲ್ಲಿ ವೀರಶೈವ ಲಿಂಗಾಯತ ಮಠಮಾನ್ಯಗಳು ಅಭೂತಪೂರ್ವ ಸೇವೆ ನೀಡಿವೆ. ಮಠದ ಆಸ್ತಿಯನ್ನು ಸಾರ್ವಜನಿಕರ ಶ್ರೇಯಸ್ಸಿಗೆ ಧಾರೆ ಏರಿದಿವೆ. ಇಂದಿಗೂ ಜಗತ್ತು ಭಾರತದತ್ತ ನೋಡುತ್ತಿದ್ದು, ಇದಕ್ಕೆ ಮುಖ್ಯ ಕಾರಣ ಆಧ್ಯಾತ್ಮಿಕ ಚುಂಬನ ಶಕ್ತಿ ಎಂದು ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಪ್ರಭುಶಂಕರೇಶ್ವರ ಅನುಭವ ಮಂಟಪದ ಆವರಣದಲ್ಲಿ ಲಿಂ. ರಾಜಗುರು ಪ್ರಭುರಾಜೇಂದ್ರ ಮಹಾಸ್ವಾಮಿಗಳ ಜನ್ಮಶತಮಾನೋತ್ಸವ, ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಮೃತ ಮಹೋತ್ಸವ, ಪ್ರಭುಶಂಕರೇಶ್ವರ ಅನುಭವ ಮಂಟಪ ಲೋಕಾರ್ಪಣೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಬಸವ ಪುರಾಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮ್ಮ ದೇಶ ಸಂಸ್ಕೃತಿ, ಆಧ್ಯಾತ್ಮಿಕದಿಂದ ಸಂಪತ್ಭರಿತವಾಗಿದೆ. ದೇಶದಲ್ಲಿ ಭಕ್ತಿ ಮತ್ತು ಭಗವಂತನ ಮಧ್ಯ ನಿತ್ಯ ನಿಕಟ ಸಂಪರ್ಕವಿದೆ. ಆದ್ದರಿಂದ ಅಂತಹ ದೇಶದಲ್ಲಿ ನಾವೆಲ್ಲರೂ ಸುಖದಿಂದ ಬದುಕುತ್ತಿದ್ದೇವೆ ಎಂಬುದು ಮುಖ್ಯವಾಗಿದೆ ಎಂದರು.

ಮುಂಡರಗಿ ಜಗದ್ಗುರು ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ನಾಡೋಜ ಅನ್ನದಾನೇಶ್ವರ ಸ್ವಾಮೀಜಿ ಬಸವ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಸವ ಪುರಾಣ ಸಭ್ಯತೆ, ಸಂಸ್ಕೃತಿ ಮತ್ತು ನಮ್ಮ ದೇಶ ಕಟ್ಟುವಂತ ಶಕ್ತಿ ಕೊಡುತ್ತದೆ. ಬಸವ ಪುರಾಣದಿಂದ ಬಸವಣ್ಣವರು ಕಾಯಕ ಕಲಿಸಿದ್ದಾರೆ ಎಂದು ಹೇಳಿದರು.

ಪ್ರಭುಶಂಕರೇಶ್ವರ ಗಚ್ಚನಮಠದ ಶಂಕರರಾಜೇಂದ್ರ ಮಹಾಸ್ವಾಮಿಗಳು, ಹೊಳೆ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಮಹಾಸ್ವಾಮಿಗಳು, ಬೆಟ್ಟದಪುರ ವಿರಕ್ತಮಠದ ಚನ್ನಬಸವ ದೇಶಿಕೇಂದ್ರ ಮಹಾಸ್ವಾಮಿಗಳು, ಗುಳೇದಗುಡ್ಡದ ಒಪ್ಪುತ್ತೇಶ್ವರ ಮಹಾಸ್ವಾಮಿಗಳು, ದಂಡಿಕೇರಿ ಬಸವಲಿಂಗ ಮಹಾಸ್ವಾಮಿಗಳು, ಅಥಣಿ ಪ್ರಭು ಚನ್ನಬಸವ ಮಹಾಸ್ವಾಮಿಗಳು, ಸಿಂದಗಿ ಪ್ರಭುಸಾರಂಗ ಶಿವಾಚಾರ್ಯರು, ಮಾಜಿ ಶಾಸಕ ರಾಜಶೇಖರ ಶೀಲುವಂತ, ಪಿಎಸ್‌ಐ ಜ್ಯೋತಿ ವಾಲಿಕಾರ, ಪಪಂ ಅಧ್ಯಕ್ಷ ಬೇಬಿ ಚಹಾಣ್, ಚೇರ್ಮನ್ ಐ.ಎಸ್. ಲಿಂಗದಾಳ, ಉಪಪ್ರಚಾರ್ಯ ಆರ್.ಜಿ. ಸನ್ನಿ ಇತರರಿದ್ದರು.

ಇಂದಿನ ಆಧುನಿಕ ಯುಗದಲ್ಲಿ ಟಿವಿ ಬಂದು ಅರ್ಧ ಕೆಟ್ಟಿತು. ನಮ್ಮ ಲೋಕ ಮೊಬೈಲ್ ಬಂದು ಪೂರ್ತಿ ಕೆಟ್ಟಿತು. ಮೊಬೈಲ್ ಟಿವಿ ಬಿಟ್ಟು ಬಸವ ಪುರಾಣಕ್ಕೆ ಆಗಮಿಸುವುದರಿಂದ ತಮ್ಮ ಜೀವನ ಧನ್ಯ ಆಗುತ್ತದೆ.

ವಿರೂಪಾಕ್ಷ ಮಹಾಸ್ವಾಮಿಗಳು, ಉಪ್ಪಿನಬೆಟಿಗೇರಿ ವಿರಕ್ತಮಠ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net