

ಜಮಖಂಡಿ: ದೇಶಕ್ಕೆ ಜೈನ ಸಮಾಜದ ಕೊಡುಗೆ ಬಹಳಷ್ಟಿದೆ. ಇತಿಹಾಸದ ಪುಟದಲ್ಲಿ ಅಚ್ಚಳಿಯದ ಸೇವೆ ಸಲ್ಲಿಸಿದ್ದಾರೆ. ಕೃಷಿ, ವ್ಯಾಪಾರ, ಶೈಕ್ಷಣಿಕ ಮತ್ತು ಕನ್ನಡ ಭಾಷೆಗೆ ಸಮಾಜದ ಕೊಡುಗೆ ಅಪಾರ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಬಣ್ಣಿಸಿದರು.
ನಗರದ ಬಿಎಲ್‌ಡಿಇ ಮೈದಾನದಲ್ಲಿ ದಕ್ಷಿಣ ಭಾರತ ಜೈನ ಸಭಾ, ವೀರ ಸೇವಾದಳ ಮಧ್ಯವರ್ತಿ ಸಮಿತಿ ಹಾಗೂ ವಿವಿಧ ಜೈನ ಸಮಾಜದ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡ ಪ್ರಥಮಾಚಾರ್ಯ 108 ಶಾಂತಿಸಾಗರ ಮಹಾರಾಜರ 70ನೇ ಪುಣ್ಯತಿಥಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೈನ ಧರ್ಮ ಶಾಂತಿ, ಅಹಿಂಸೆ ತತ್ವ ಪಾಲಿಸುವ ಧರ್ಮ. 24 ತೀರ್ಥಂಕರರನ್ನು ದೇಶಕ್ಕೆ ನೀಡಿದ ಕೀರ್ತಿ ಜೈನ ಸಮುದಾಯಕ್ಕೆ ಸಲ್ಲುತ್ತದೆ ಎಂದರು.
ಯೋಜನಾ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ ಮಾತನಾಡಿ, ಕಾಂಗ್ರೆಸ್ ಪಕ್ಷ ಖಂಡಿತವಾಗಿಯೂ ನಿಮ್ಮ ಜೊತೆಗಿದೆ. ಸಮಾಜದ ಬೇಡಿಕೆಯನ್ನು ಖಂಡಿತವಾಗಿ ಈಡೇರಿಸುತ್ತೇವೆ. ಜೈನ ಧರ್ಮ ಅಹಿಂಸಾ ಪರಮೋ ಧರ್ಮ ಹೊಂದಿರತಕ್ಕಂತ ಸಮಾಜವಾಗಿದೆ ಎಂದು ತಿಳಿಸಿದರು.
ಸಕ್ಕರೆ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಈ ಜಗತ್ತಿನಲ್ಲಿ ಧರ್ಮ ಉಳಿಯಬೇಕಾದರೆ ಜೈನ ಸಮುದಾಯ ಕಾರಣ ಅಂತ ಹೇಳಬಹುದು. ನಾವು ಈ ಧರ್ಮದಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿದವರಲ್ಲ. ದೇವರು ಯಾರು ಯಾರನ್ನು ಯಾರ ಹೊಟ್ಟೆಯಲ್ಲಿ ಸೃಷ್ಟಿ ಮಾಡುತ್ತಾನೋ ಅಲ್ಲಿ ಹುಟ್ಟುತ್ತಾರೆ. ಐದು ತತ್ವಗಳನ್ನು ಜೈನ ಸಮುದಾಯದವರು ಪಾಲನೆ ಮಾಡುತ್ತಾರೆ. ಮಾನವೀಯ ಮೌಲ್ಯ ಎತ್ತಿ ಹಿಡಿದಿರತಕ್ಕಂತವರು ಜೈನರು ಎಂದು ಹೇಳಿದರು.
ಅಥಣಿ ಶಾಸಕ,ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮಾತನಾಡಿ, ಪ್ರತ್ಯೇಕ ಜೈನ ನಿಗಮ ಮಂಡಳಿ ಸ್ಥಾಪಿಸಬೇಕು. ಪ್ರತ್ಯೇಕ ವಸತಿ ನಿಲಯ ಮಾಡಬೇಕು ಎಂದು ನೀವು ಮನವಿ ಸಲ್ಲಿಸಿದ್ದೀರಿ. ಇದು ಸರ್ಕಾರದಲ್ಲಿ ಚಿಂತನೆ ನಡಿತಿದೆ. ಪ್ರತ್ಯೇಕ ಮೀಸಲಾತಿ ಕೊಡಬೇಕು ಎಂದು ಡಿ. ಸುಧಾಕರ ನಮಗೆ ಹೇಳುತ್ತಿದ್ದು, ಅವರಿಗೆ ನಾವು ಸಂಪೂರ್ಣ ಬೆಂಬಲ ಕೊಡುತ್ತೇವೆ. ನಿಮ್ಮ ಬೇಡಿಕೆಗಳನ್ನು ಸಂಪೂರ್ಣ ಈಡೆರಿಸುತ್ತೇವೆ. ಧರ್ಮಸ್ಥಳದಲ್ಲಿ ಎಡಪಂಥಿಗಳು ನಡೆಸಿರುವ ಹುನ್ನಾರವನ್ನು ನಾವು ಖಂಡಿತವಾಗಿ ಖಂಡಿಸುತ್ತೇವೆ ಎಂದರು.
ನಾಂದಣಿ ಸಂಸ್ಥಾನ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು, ಕೊಲ್ಹಾಪುರ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು, ಹುಂಚ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಶ್ರೀಗಳು, ಓಲೆಮಠದ ಆನಂದ ದೇವರು, ವಿವಿಧ ಮಠಾಧೀಶರು ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ನಾಡೋಜ ಜಗದೀಶ ಗುಡಗುಂಟಿ, ಜೆ.ಟಿ.ಪಾಟೀಲ, ಅಭಯಕುಮಾರ ಪಾಟೀಲ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಮುರುಗೇಶ ನಿರಾಣಿ, ಸಂಜು ಪಾಟೀಲ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಜಿ.ಎಸ್.ನ್ಯಾಮಗೌಡ, ಮಾಜಿ ಶಾಸಕ ಆನಂದ ನ್ಯಾಮಗೌಡ, ಸಮಾಜದ ಮುಖಂಡರು ಇದ್ದರು. ಅರುಣಕುಮಾರ ಶಹಾ ಸ್ವಾಗತಿಸಿದರು. ಡಾ.ರಾಗಿಣಿ ಪಾಟೀಲ, ಅಣ್ಣಾಸಾಹೇಬ ಪಡನಾಡ ನಿರೂಪಿಸಿದರು. ವರ್ಧಮಾನ ನ್ಯಾಮಗೌಡ ವಂದಿಸಿದರು.
ವೇದಿಕೆಯಲ್ಲಿ ಅಥಣಿ ಶಾಸಕ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪ್ರಸ್ತಾಪಿಸಿದ ಧರ್ಮಸ್ಥಳದ ವಿಷಯಕ್ಕೆ ಸಂಬಂಧಿಸಿದಂತೆ ತೇರದಾಳ ಶಾಸಕ ಸಿದ್ದು ಸವದಿ ಮಾತನಾಡುತ್ತ ಕಾಂಗ್ರೆಸ್ ಸರ್ಕಾರ ಧರ್ಮಸ್ಥಳದ ಬಗ್ಗೆ ವಿನಾಕಾರಣ ಪಿತೂರಿ ನಡೆಸಿ ಎಸ್‌ಐಟಿ ರಚನೆ ಮಾಡಿದೆ. ಅಲ್ಲಿ ಎಲ್ಲ ಕಡೆಗೆ ನೆಲವನ್ನು ಅಗೆದರೂ ಒಂದೂ ಬುರುಡೆ ಸಿಗಲಿಲ್ಲ. ಕೊನೆಗೆ ಕಾಂಗ್ರೆಸ್ ಪಕ್ಷಕ್ಕೆ ಸತ್ಯಾಸತ್ಯತೆ ತಿಳಿದ ಮೇಲೆ ಎಲ್ಲರೂ ಈಗ ಮಾತಾಡ್ತಾ ಇದ್ದಾರೆ ಎಂದರು.
ನಮ್ಮ ದೇಶದಲ್ಲಿ ಎಲ್ಲರೂ ಗೋವು ಪೂಜೆ ಮಾಡುತ್ತಾರೆ. ರಾಜ್ಯದಲ್ಲಿ ಗೋವು ಕೆಚ್ಚಲು ಕೊಯ್ಯುವವರು ಇದ್ದಾರೆ. ಅಂತಹವರ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ ಜಾರಕಿಹೊಳಿ, ವಿದೇಶಗಳಿಗೆ ಬಿಪ್ ರಫ್ತು ಮಾಡುವಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂದು ಪ್ರಶ್ನಿಸುತ್ತ ತಮ್ಮ 2 ಬೆರಳು ತೋರಿಸಿದರು. ಸಿದ್ದು ಸವದಿ ಅವರು ಹೇಳಿದಂತೆ ಧರ್ಮಸ್ಥಳದಲ್ಲಿ ತನಿಖೆಗೆ ಎಸ್‌ಐಟಿಯನ್ನು ನಮ್ಮ ಸರ್ಕಾರ ನಿಯೋಜಿಸಿಲ್ಲ. ಯಾರೋ ಒಬ್ಬರೂ ಕೋರ್ಟ್ ಮೋರೆ ಹೋಗಿದ್ದರಿಂದ ಎಸ್‌ಐಟಿಯಿಂದ ತನಿಖೆ ಮಾಡಿಸಲಾಗುತ್ತಿದೆ. ಅದಕ್ಕೆ ನಮ್ಮ ಸರ್ಕಾರ ಹೊಣೆಯಲ್ಲ, ಸಮಾಜಕ್ಕೆ ತಪ್ಪು ಸಂದೇಶ ಹೋಗಬಾರದು. ಇದು ರಾಜಕೀಯ ಪ್ರೇರಿತ ಕಾರ್ಯಕ್ರಮವಲ್ಲ. ಇದು ಧಾರ್ಮಿಕ ಕಾರ್ಯಕ್ರಮ. ಇಲ್ಲಿ ರಾಜಕೀಯವಾಗಿ ಮಾತನಾಡಬಾರದು ಎಂದು ಖಾರವಾಗಿ ಉತ್ತರಿಸಿದರು.