ಅಭಿವೃದ್ಧಿಯಲ್ಲಿ ಆದಿಬಣಜಿಗರ ಕೊಡುಗೆ ಅಪಾರ

Oplus_1024
Oplus_1024
Published on

ಐಗಳಿ: ರಾಜ್ಯದ ಆರ್ಥಿಕ ಬಲವರ್ಧನೆಗೆ ಆದಿಬಣಜಿಗ ಸಮುದಾಯದ ಕೊಡುಗೆ ಅಪಾರ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಸಮೀಪದ ಯಲಿಹಡಲಗಿ ಗ್ರಾಮದಲ್ಲಿ ಅಖಿಲ ಕರ್ನಾಟಕ ಆದಿಬಣಜಿಗ ಅಭಿವೃದ್ಧಿ ಸಂಘದಿಂದ ನಿರ್ಮಾಣವಾಗುತ್ತಿರುವ ಶ್ರೀ ಸೋಮೇಶ್ವರ ದೇವಸ್ಥಾನದ ಗರ್ಭಗುಡಿ ಅಡಿಗಲ್ಲು ಪೂಜೆ ಶನಿವಾರ ನೆರವೇರಿಸಿ ಮಾತನಾಡಿದ ಅವರು, 5 ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದ್ದು, ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.

ಅಂದಾಜು 26 ಎಕರೆ ಪ್ರದೇಶದ ವಿಸ್ತೀರ್ಣದಲ್ಲಿ ಬೃಹತ್ ಸಮುದಾಯ ಭವನ, ಶಾಲೆ ಆರಂಭಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಸರ್ಕಾರದ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಅಖಿಲ ಕರ್ನಾಟಕ ಆದಿಬಣಜಿಗ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಅಜಪ್ಪಣ್ಣ ನಾಗರಾಳೆ ಮಾತನಾಡಿ, ಸೋಮೇಶ್ವರ ಲಿಂಗ ಪ್ರತಿಷ್ಠಾಪನೆ ಸಂಕಲ್ಪ ಹೊಂದಲಾಗಿದೆ. ಅಣ್ಣಾಸಾಹೇಬ ಜೊಲ್ಲೆ ದಂಪತಿ, ಶಾಸಕ ಲಕ್ಷ್ಮಣ ಸವದಿ ಹಾಗೂ ಮಾಜಿ ಶಾಸಕ ಮಹೇಶ ಕುಮಠಳ್ಳಿ ಸೇರಿ ಅನೇಕ ದಾನಿಗಳ ಸಹಕಾರದಿಂದ 1.30 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಸಮುದಾಯ ಭವನ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಸೌದತ್ತಿ ಓಂಕಾರ ಮಠದ ಶಿವಶಂಕರ ಸ್ವಾಮೀಜಿ ಮಾತನಾಡಿದರು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಲಕ್ಷ್ಮಣ ಮಗದುಮ್ಮ, ರಾಜು ಅಲಬಾಳ, ಮಹಾದೇವ ರೆಂದಾಳೆ, ಸದಾಶಿವ ಬಿರಾದಾರ, ಸುರೇಶ ಬಿರಾದಾರ, ಗಂಗಪ್ಪ ಉಳ್ಳಾಗಡ್ಡಿ, ಕಲ್ಲಪ್ಪ ನಿವಲಗಿ, ಶ್ರೀಶೈಲ ಡಂಗಿ, ಎ.ಎಸ್.ನಾಯಕ, ವಿಜಯಗೌಡ ಪಾಟೀಲ, ಮುತ್ತಣ್ಣ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net