ಹೊನ್ನಾಪುರಮಠ ಕೊಡುಗೆ ಅಪಾರ

9 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೊನ್ನಾಪುರಮಠ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಅವರ ಮತ್ತು ಹಿಂದಿನ ಕಾಲದ ಕವಿಗಳಿಗೆ ಒಂದೊಂದು ರೀತಿಯ ಸಾಹಿತ್ಯ ರಚನೆಯ ಹೆದ್ದಾರಿಗಳಿದ್ದವು. ಇಂದು ಅವು ಕಿರುದಾರಿಗಳಾಗಿವೆ. ವಿಭಿನ್ನ ಪ್ರಕಾರದ ಸಾಹಿತ್ಯ ರಚನೆ ಆಗುತ್ತಿರುವುದನ್ನು ಕಾಣುತ್ತೇವೆ ಎಂದು ಕಲಬುರ್ಗಿಯ ಕೇಂದ್ರಿಯ ವಿಶ್ವ ವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವಿಕ್ರಮ ವಿಸಾಜಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ರಾ.ಹ. ದೇಶಪಾಂಡೆ ಭವನದಲ್ಲಿ ಗದಿಗೆಯ್ಯ ಹೊನ್ನಾಪುರಮಠ ದತ್ತಿ ನಿಮಿತ್ತ ಭಾನುವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯದ ಇತ್ತೀಚಿನ ಸ್ವರೂಪ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವತ್ತಿನ ಸಾಹಿತ್ಯ ಅನೇಕ ಬಣ್ಣಗಳ ಸಮ್ಮಿಶ್ರಣ ಸಂಕೀರ್ಣವಾಗಿ ರಚನೆಯಾಗಿದೆ. ಅನುವಾದದ ಮಹಾಪೂರ ಹರಿದು ಬರುತ್ತಿದೆ. ವಿದೇಶಿ ಸಾಹಿತ್ಯದ ಅನುಭವ ಕಟ್ಟಿಕೊಡುವ ಭ್ರಮೆಯಿಂದ ಹೊರ ಬಂದಿದ್ದೇವೆ. ಇಂದಿನ ಸಾಹಿತ್ಯದಲ್ಲಿ ಜೀವನದ ಆದರ್ಶ ಮೌಲ್ಯಗಳೇನಿವೆ? ಜಾಗತೀಕರಣದ ತಲ್ಲಣ, ಮಾರುಕಟ್ಟೆ ಪ್ರಭಾವಗಳ ಶೋಧನೆ ಜೀವನವನ್ನು ಭೋಗಿಸುತ್ತಿದ್ದೇವೆ ಹೊರತು ಜೀವನ ಜೀವಿಸುತ್ತಿಲ್ಲ ಎಂಬುದನ್ನು ಸಾಹಿತ್ಯ ಮನಗಾಣಬೇಕಿದೆ ಎಂದರು.
ದತ್ತಿ ದಾನಿ ಪರ ಜಗದೇವಿ ಹೊನ್ನಾಪುರಮಠ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರೊ. ಸಿ.ಆರ್. ಯರವಿನತೆಲಿಮಠ ಮಾತನಾಡಿ, ಸಾಹಿತ್ಯದ ವಿವಿಧ ಪ್ರಕಾರಗಳ ಚೂರು, ಚೂರುಗಳನ್ನು ಕೂಡಿಸಿ ಸಮಗ್ರ ಚಿತ್ರಣವನ್ನು ವಿಕ್ರಮ ವಿಸಾಜಿ ಕಟ್ಟಿಕೊಟ್ಟರು. ಇವತ್ತು ಗಟ್ಟಿ ಸಾಹಿತ್ಯದ ಕೊರತೆ ಎದ್ದು ಕಾಣುತ್ತಿದೆ. ಇವತ್ತಿನ ಸಾಹಿತ್ಯಕ್ಕೆ ವಿಶಾಲತೆಯಿದೆ. ಆದರೆ ಆಳದ ಕೊರತೆ ಇದೆ ಎಂದರು.
ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಹೇಮಾ ಪಟ್ಟಣಶೆಟ್ಟಿ, ನಿಂಗಣ್ಣ ಕುಂಟಿ, ಸರಸ್ವತಿ ಪೂಜಾರ, ಸುಜಾತಾ ಹಡಗಲಿ, ವೀಣಾ ತಿರಕಪಡಿ, ಭಾರತಿ ಹಿರೇಮಠ, ಮೇಘಾ ಹುಕ್ಕೇರಿ, ಬಿ.ಎಸ್. ಶಿರೋಳ, ನರಸಿಂಹ ಪರಾಂಜಪೆ, ಹರ್ಷ ಡಂಬಳ, ದುಷ್ಯಂತ ನಾಡಗೌಡ, ರಾಮಚಂದ್ರ ಧೋಂಗಡೆ, ಯು.ಎಸ್. ಕುನ್ನಿಭಾವಿ, ಮಹಾಂತೇಶ ನರೇಗಲ್, ಇತರರು ಇದ್ದರು.
ಸತೀಶ ತುರಮರಿ ಸ್ವಾಗತಿಸಿದರು. ಶಿ.ಮ. ರಾಚಯ್ಯನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಗುರು ಹಿರೇಮಠ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net