ದೇಶದ ಪ್ರಗತಿಯಲ್ಲಿ ಸರ್ಕಾರಿ ನೌಕರರ ಕೊಡುಗೆ ಅಪಾರ

ದೇಶದ ಪ್ರಗತಿಯಲ್ಲಿ ಸರ್ಕಾರಿ ನೌಕರರ ಕೊಡುಗೆ ಅಪಾರ
Published on

ಯಳಂದೂರು: ದೇಶದ ಪ್ರಗತಿಯಲ್ಲಿ ಸರ್ಕಾರಿ ನೌಕರರ ಪಾತ್ರ ಹಿರಿದಾಗಿದ್ದು, ಸಾರ್ವಜನಿಕರು ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯಿಂದ ಕೆಲಸ ಮಾಡುವುದರಿಂದ ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ದೇವಾಂಗ ಬೀದಿಯಲ್ಲಿರುವ ಸರ್ಕಾರಿ ನೌಕರರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರಿ ನೌಕರರು ಬುದ್ಧಿಜೀವಿಗಳಾಗಿರುತ್ತಾರೆ. ಇವರು ಸರ್ಕಾರದ ಸೇವೆಯನ್ನು ಸಾಮಾನ್ಯ ಜನರಿಗೆ ಕೊಂಡೊಯ್ಯುವ ರೂವಾರಿಗಳಾಗಿದ್ದಾರೆ. ಹಾಗಾಗಿ ತಮ್ಮ ಕರ್ತವ್ಯ ಪಾಲನೆಯಲ್ಲಿ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದರು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ ತೊಂದರೆಯಾಗುತ್ತಿದೆ. ರಾಜ್ಯ ದಿವಾಳಿಯಾಗುತ್ತಿದೆ ಎಂದು ವಿರೋಧ ಪಕ್ಷಗಳು ಕುಟುಕುತ್ತಿರುವುದು ಸೋಜಿಗವಾಗಿದೆ. ರಾಜ್ಯ ಸರ್ಕಾರ ಸದೃಢ ಆಡಳಿತ ನೀಡುತ್ತಿದೆ. ಶಾಸಕರ ಅನುದಾನ ಈಗಾಗಲೇ ನೀಡಲಾಗಿದೆ. ಸರ್ಕಾರಿ ನೌಕರರ ಬೇಡಿಕೆಗಳ ಈಡೇರಿಕೆಗೂ ಸರ್ಕಾರ ಸ್ಪಂದಿಸಿದೆ. ಮುಂಬರುವ ಬಜೆಟ್‌ನಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುವ ಭರವಸೆಯೂ ಸರ್ಕಾರದಿಂದ ಲಭಿಸಿದೆ ಎಂದರು.

ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿನ ಸಮುದಾಯ ಭವನಗಳನ್ನು ಪೂರ್ಣಗೊಳಿಸಲು 25 ಕೋಟಿ ರೂ. ಅನುದಾನದ ಅವಶ್ಯಕತೆ ಇದ್ದು, ಇದು ಲಭಿಸುವ ಭರವಸೆ ಇದೆೆ. ಇದಲ್ಲದೆ ಶಿಕ್ಷಕರ ಭವನ ಹಾಗೂ ಪತ್ರಕರ್ತರ ಭವನಕ್ಕೆ ನಿವೇಶನದ ಬೇಡಿಕೆ ಇತ್ತು. ಇದಕ್ಕೆ ಈಗಾಗಲೇ ನಿವೇಶನ ಗುರುತಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಭವನಕ್ಕೂ ನಿವೇಶನ ನೀಡಲು ಕ್ರಮ ವಹಿಸಲಾಗುವುದು ಎಂದರು.
ಎಸ್‌ಎಸ್‌ಎಲ್‌ಸಿ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸರ್ಕಾರಿ ನೌಕರರ ಸಂಘದ ಮಕ್ಕಳಿಗೆ, ವರ್ಗಾವಣೆಗೊಂಡ, ಸೇವಾ ನಿವೃತ್ತಿ ಹೊಂದಿದ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ತಾಲೂಕು ಅಧ್ಯಕ್ಷ ವೈ.ಎಂ. ಮಂಜುನಾಥ್, ಪಪಂ ಸದಸ್ಯ ಮಹದೇವನಾಯಕ ತಹಸೀಲ್ದಾರ್ ಜಯಪ್ರಕಾಶ್, ಪಪಂ ಮುಖ್ಯಾಧಿಕಾರಿ ಮಹೇಶ್‌ಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್, ಉಪಖಜಾನೆಯ ಸಹಾಯಕ ನಿರ್ದೇಶಕ ಪಾಂಡುರಂಗ ಸೇರಿದಂತೆ ವಿವಿಧ ಇಲಾಖೆ ಸರ್ಕಾರಿ ಅಧಿಕಾರಿಗಳು, ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net