

ಬೀಳಗಿ: ಸಮಾಜಕ್ಕೆ ಶಿಕ್ಷಣ ಸಂಸ್ಥೆಗಳ ಕೊಡುಗೆ ಅನನ್ಯವಾಗಿದೆ ಎಂದು ಬಾಡಗಂಡಿಯ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ ಹೇಳಿದರು.
ತಾಲೂಕಿನ ಬಾಡಗಂಡಿ ಎಸ್. ಆರ್.ಪಾಟೀಲ ಶಿಕ್ಷಣ ಸಂಸ್ಥೆಯ ಬಾಪೂಜಿ ಅಂತರಾಷ್ಟ್ರೀಯ ಶಾಲೆ ಹಾಗೂ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ, ಸಾರ್ಥಕ ಸಂಭ್ರಮ ಮತ್ತು ಪಾದಪೂಜೆ, ‘ನಿಮ್ಮನ್ನು ಹೆತ್ತವರು’ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯೆ ಎಲ್ಲಕಿಂತ ದೊಡ್ಡದು, ಯಾರು ಕದಿಯಲಾಗದ ಸಂಪತ್ತು ಎಂದರು.
ಮಕ್ಕಳ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ.ಗು ಸಿದ್ದಾಪುರ ಮಾತನಾಡಿ, ಎಸ್.ಆರ್.ಪಾಟೀಲ ಒಬ್ಬ ವ್ಯಕ್ತಿಯಲ್ಲ ಈ ಭಾಗದ ಒಂದು ದೊಡ್ಡ ಶಕ್ತಿ. ಪಟೀಲರು ಶಿಕ್ಷಣ ಸಂಸ್ಥೆ ಮೂಲಕ ಸಂಸ್ಕಾರಯುತ ಶಿಕ್ಷಣ ನೀಡುತ್ತಿದ್ದಾರೆ ಎಂದು ಹೇಳಿದರು.
ಪ್ರಾಚಾರ್ಯ ಶಿವಭೂದ ಶೆಟ್ಟಿ ಪ್ರಸ್ತಾವಿಕ ಮಾತನಾಡಿ, ಅಕ್ಷರ ಕಲಿತವರು ಭ್ರಷ್ಟರಾಗಬಹುದು ಆದರೆ ಸಂಸ್ಕಾರ ಕಲಿತವರು ಎಂದೂ ಭ್ರಷ್ಟರಾಗುವುದಿಲ್ಲ ಎಂದರು.
ಆಡಳಿತ ಮಂಡಳಿ ಸದಸ್ಯೆ ಅನುಷಾ ಪಾಟೀಲ, ಆಡಳಿತಾಧಿಕಾರಿ ಎಚ್.ಬಿ.ಧರ್ಮಣ್ಣವರ, ವೈದ್ಯಕೀಯ ವ್ಯವಸ್ಥಾಪಕ ವಿಜಯಾನಂದ ಹಳ್ಳಿ, ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಎ.ಎ.ಬಾಳಿಕಾಯಿ, ಅಶೋಕ ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.