‘ಡಿಜಿಟಲ್ ಇಂಡಿಯಾ’ ಕೊಡುಗೆ ಅಪಾರ

The contribution of 'Digital India' is immense
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವ್ಯವಹಾರ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸಮ್ಮೇಳನದ ಸಂಚಿಕೆಯನ್ನು ಡಿಜಿಟಲ್ ಬ್ರ್ಯಾಂಡ್ ಅಂಬ್ಯಾಸಿಡರ್ ಹಾಗೂ ವಿಜನ್ ಡಿಜಿಟಲ್ ಇಂಡಿಯಾದ ಅಧ್ಯಕ್ಷ ಡಾ.ಹರಿಕೃಷ್ಟ ಮಾರಮ್ ಅವರು ಬಿಡುಗಡೆ ಮಾಡಿದರು. ಪ್ರೊ.ಎಸ್.ಬಿ. ಕಾಮಶೆಟ್ಟಿ, ಪ್ರೊ.ಮಲ್ಲಿಕಾರ್ಜುನ ಎನ್.ಎಲ್, ಪ್ರೊ.ಬಿ.ಎಸ್.ನಾವಿ ಮತ್ತಿತರರಿದ್ದಾರೆ.
Published on

ವಿಜಯಪುರ: ಜಾಗತಿಕ ಮಟ್ಟದ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಮುಂಚೂಣಿ ರಾಷ್ಟ್ರವಾಗಿರುವುದಕ್ಕೆ ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಕೊಡುಗೆ ಅಪಾರವಾಗಿದೆ ಎಂದು ಡಿಜಿಟಲ್ ಬ್ರ್ಯಾಂಡ್ ಅಂಬ್ಯಾಸಿಡರ್ ಹಾಗೂ ವಿಜನ್ ಡಿಜಿಟಲ್ ಇಂಡಿಯಾದ ಅಧ್ಯಕ್ಷ ಡಾ.ಹರಿಕೃಷ್ಟ ಮಾರಮ್ ಅಭಿಪ್ರಾಯಪಟ್ಟರು.

ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವ್ಯವಹಾರ ಅಧ್ಯಯನ ವಿಭಾಗ ನವದೆಹಲಿಯ ಐಸಿಎಸ್‌ಎಸ್‌ಆರ್ ಸಹಯೋಗದೊಂದಿಗೆ ಜಾಗತಿಕ ಯುಗದಲ್ಲಿ ಡಿಜಿಟಲ್ ಇಂಡಿಯಾ ಭವಿಷ್ಯದ ನಿರೀಕ್ಷೆಗಳು ವಿಷಯದ ಕುರಿತು ಹಮ್ಮಿಕೊಂಡಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನದ ವಿಷಯದಲ್ಲಿ ಭಾರತವು ಜಗತ್ತನ್ನು ಹೇಗೆ ಮುನ್ನಡೆಸುತ್ತಿದೆ ಎಂಬುದನ್ನು ವಿವರಿಸಿದರು.

ಭಾರತವು ಹೊಂದಿರುವ ಜನಸಂಖ್ಯಾ ಲಾಭಾಂಶದ ಪ್ರಯೋಜನ ಮತ್ತು ಅದು ಜಾಗತಿಕ ಯುಗವನ್ನು ಹೇಗೆ ಮುನ್ನಡೆಸುತ್ತಿದೆ ಎಂಬುದನ್ನು ವಿವರಿಸಿದ ಅವರು ಭಾರತದ ಸಮಗ್ರ ಅಭಿವೃದ್ಧಿಗೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿರುವ ಪ್ರಯತ್ನಗಳ ಮಹತ್ವವನ್ನು ವಿಶ್ಲೇಷಿಸಿದರು.

ಭಾರತೀಯ ಆರ್ಥಿಕತೆಯ ಮೇಲೆ ಡಿಜಿಟಲ್ ಇಂಡಿಯಾ ಉಪಕ್ರಮಗಳ ಮಹತ್ವ ಮತ್ತು ಪ್ರಭಾವದ ಕುರಿತು ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್ ವಿವರಿಸಿದರು.

ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ನಿಕಾಯದ ಡೀನ್ ಪ್ರೊ.ಎಸ್.ಬಿ. ಕಾಮಶೆಟ್ಟಿ ಮಾತನಾಡಿ, ಡಿಜಿಟಲೀಕರಣವು ಸಕಾರಾತ್ಮಕ ಫಲಿತಾಂಶವನ್ನು ತರಲು ಸರಿಯಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ವ್ಯವಹಾರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಮಲ್ಲಿಕಾರ್ಜುನ ಎನ್.ಎಲ್. ಮಾತನಾಡಿ, ಡಿಜಿಟಲೀಕರಣವು ಭಾರತದ ಭವಿಷ್ಯವನ್ನು ನಿರ್ಮಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕುಲಸಚಿವ ಪ್ರೊ.ಬಿ.ಎಸ್.ನಾವಿ ಮಾತನಾಡಿ, ಡಿಜಿಟಲ್ ಇಂಡಿಯಾ ವಿಷಯ ಇಂದಿನ ಅಗತ್ಯವಾಗಿದೆ. ಡಿಜಿಟಲ್ ಯುಗದ ವಿಕಸನವು ಅನೇಕ ಬೆಳವಣಿಗೆಗಳಿಗೆ ಕಾರಣವಾಯಿತು ಮತ್ತು ಅವು ಫಲಪ್ರದ ಮೊಬೈಲ್ ಶಿಕ್ಷಣಕ್ಕೆ ದಾರಿ ಮಾಡಿಕೊಟ್ಟಿವೆ ಎಂದು ಹೇಳಿದರು.

ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ಸಂಯೋಜಕ ಡಾ.ಚಂದ್ರಶೇಖರ.ಎಂ.ಮಠಪತಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಅನಿತಾ.ಆರ್.ನಾಟೇಕರ ವಂದಿಸಿದರು. ಸಂಶೋಧನಾ ವಿದ್ಯಾರ್ಥಿನಿ ಪ್ರಿಯಾಂಕಾ ಬನ್ಸೊಡೆ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net