

ನೆಲಮಂಗಲ: ಆರೋಗ್ಯವಂತ ಸಮಾಜ ನಿರ್ಮಾಣ ಕಾರ್ಯದಲ್ಲಿ ಪೌರಕಾರ್ಮಿಕರು ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ನಗರಸಭೆ ಪೌರಾಯುಕ್ತ ಎಲ್.ಮಂಜುನಾಥ್‌ಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಪವಾಡ ಶ್ರೀ ಬಸವಣ್ಣದೇವರ ಮಠದಲ್ಲಿ ಬುಧವಾರ ನಗರಸಭೆ ಹಾಗೂ ಪೌರ ಕಾರ್ಮಿಕರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದರು.
ಕರೊನಾ ತುರ್ತು ಪರಿಸ್ಥಿತಿಯಲ್ಲೂ ಸೇನಾನಿಗಳಂತೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರ ಹಿತ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಪೌರಕಾರ್ಮಿಕರಿಗೆ ಪ್ರತಿ ತಿಂಗಳೂ ಆರೋಗ್ಯ ತಪಾಸಣೆ ಮಾಡಿಸಲಾಗುವುದು ಎಂದರು.
ನಿವೇಶನ ಹೊಂದಿರುವ ಕಾಯಂ ಪೌರಕಾರ್ಮಿಕರಿಗೆ ಸರ್ಕಾರದ ಗೃಹಭಾಗ್ಯ ಯೋಜನೆಯಡಿ 7.5 ಲಕ್ಷ ರೂ. ಸಹಾಯಧನವನ್ನು ಮನೆ ನಿರ್ಮಿಸಿಕೊಳ್ಳಲು ಕೊಡಿಸುವುದು, ನಗರಸಭೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರಿಗೆ ನಿವೇಶನ ದೊರಕಿಸಿಕೊಡಲು ಯತ್ನಿಸುವ ಜತೆಗೆ ನಗರಸಭೆಗೆ ವಿಲೀನವಾಗಿರುವ 4 ಗ್ರಾಮಪಂಚಾಯಿತಿಗಳ 129 ಮಂದಿ ಪೌರಕಾರ್ಮಿಕರಿಗೆ 6 ತಿಂಗಳಿಂದ ಬಾಕಿ ಇದ್ದ 95 ಲಕ್ಷ ರೂ. ವೇತನವನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಒಗ್ಗಟ್ಟಿನ ಕೊರತೆಯಿಂದಾಗಿ ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ಪೌರಕಾರ್ಮಿಕರ ಕೈ ಸೇರುತ್ತಿಲ್ಲ. ಪೌರಕಾರ್ಮಿಕರ ವೇತನ ಹೆಚ್ಚಿಸಬೇಕು. ವಸತಿ ರಹಿತ ಕಾಯಂ ಹಾಗೂ ಗುತ್ತಿಗೆ ಆಧಾರಿತ ಪೌರಕಾರ್ಮಿಕರಿಗೆ ಉಚಿತ ನಿವೇಶನ ಕಲ್ಪಿಸಿಕೊಡುವ ಕೆಲಸ ಅಧಿಕಾರಿ ಜನಪ್ರತಿನಿಧಿಗಳು ಮಾಡಬೇಕು ಎಂದು ಪೌರಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಚಂದ್ರ ತಿಳಿಸಿದರು.
ಸೇವಾನಿಷ್ಠ ಪೌರಕಾರ್ಮಿಕರು ಮತ್ತು ಕರೊನಾ ಗೆದ್ದು ಬಂದ 25 ಕ್ಕೂ ಹೆಚ್ಚು ಮಂದಿ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್‌ನಿಂದ ಪೌರಕಾರ್ಮಿಕರಿಗೆ ಸ್ಯಾನಿಟೈಸರ್ ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು. ಪೌರಕಾರ್ಮಿಕರ ಸಂಘದ ವಿಭಾಗೀಯ ಅಧ್ಯಕ್ಷ ಎಲ್.ಅಂಕಯ್ಯ, ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಬಿ.ರಂಗನಾಥ್, ಸದಸ್ಯ ಟಿ.ವೆಂಕಟೇಗೌಡ, ನಗರಸಭೆೆ ಸದಸ್ಯರಾದ ಎನ್.ಆಂಜಿನಪ್ಪ, ಸಿ.ಪ್ರದೀಪ್, ಪ್ರೋಬೆಷನರಿ ಮುಖ್ಯಾಧಿಕಾರಿ ಅಮೃತಾ, ಎಇಇ ಎಂ.ಬಿ.ನಾಗರಾಜು, ಆರ್.ಒ. ಸವಿತಾ, ಪರಿಸರ ಅಭಿಯಂತರೆ ಕೆ.ಎಸ್. ಉಮಾ, ಹಿರಿಯ ಆರೋಗ್ಯನಿರೀಕ್ಷಕರಾದ ಬಸವರಾಜು, ಉಮೇಶ್, ಮೀನಾಕ್ಷಿ, ಸಮುದಾಯ ಸಂಘಟಕ ನಾರಾಯಣಸ್ವಾಮಿ, ಮುಖಂಡರಾದ ಮಾರೇಗೌಡ, ನರಸಿಂಹಮೂರ್ತಿ, ಮುನಿಯಪ್ಪ, ಪೌರಕಾರ್ಮಿಕರ ಸಂಘದ ಉಪಾಧ್ಯಕ್ಷ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.