ಸ್ವಾತಂತ್ರಾೃನಂತರ ಅಭಿವೃದ್ಧಿಗೆ ಬಿಲ್ಡರ್ಸ್ ಕೊಡುಗೆ ಅಪಾರ

12
Published on

ಮೈಸೂರು: ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ಏನಾದರೂ ನೀರಾವರಿ, ಕೈಗಾರಿಕಾ ಕ್ಷೇತ್ರ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಿದ್ದರೆ ಅದು ಬಹಳ ಮುಖ್ಯವಾಗಿ ಬಿಲ್ಡರ್ಸ್, ಶಿಲ್ಪಿಗಳ ಕೊಡುಗೆ ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಮರೀಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಲ್ಡರ್ಸ್ ಅಸೋಸಿಯೇಷನ್ (ಬಿಎಐ) ಮೈಸೂರು ಘಟಕ, ಕಾನ್ಫೆಡರೇಷನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್‌ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಮೈಸೂರು ಶಾಖೆ ಹಾಗೂ ಮೈಸೂರು ಬಿಲ್ಡರ್ಸ್ ಚಾರಿಟಬಲ್ ಟ್ರಸ್ಟ್ (ಎಂಬಿಸಿಟಿ)ನಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಮೈರಿಯಾಲ್ಟಿ-2024 ಎಕ್ಸ್‌ಪೋದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನೆ ಕಟ್ಟುವ ವಿಚಾರದಲ್ಲಾಗಲಿ, ನಕ್ಷೆಯನ್ನು ತಯಾರು ಮಾಡುವುದಕ್ಕಾಗಲಿ ಬಿಲ್ಡರ್ಸ್‌ ಮಾಡುವ ಪ್ರಯತ್ನ ಶ್ಲಾಘನೀಯ. ಸ್ವಾತಂತ್ರ್ಯಾನಂತರ ಈ ದೇಶದಲ್ಲಿ ಏನಾದರೂ ಕೃಷಿ, ನೀರಾವರಿ, ಕೈಗಾರಿಕಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗಿದ್ದರೆ ಅದು ಬಹಳ ಮುಖ್ಯವಾಗಿ ಬಿಲ್ಡರ್ಸ್, ಶಿಲ್ಪಿಗಳ ಕೊಡುಗೆಯಿಂದಾಗಿದೆ ಎಂದರು.
ನಗರದಲ್ಲಿ ಮುಡಾ ಅಸ್ತಿತ್ವದಲ್ಲಿದ್ದರೂ ಅನೇಕ ಬಡಾವಣೆಗಳು ಯಾವುದೇ ನಕ್ಷೆ, ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಇಲ್ಲದೇ ನಿವೇಶನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಮೂಲ ಕಾರಣ ಮುಡಾ ಅಧಿಕಾರಿಗಳಲ್ಲಿ ಕಾರ್ಯಕ್ಷಮತೆ ಇಲ್ಲದಿರುವುದನ್ನು ನಾನು ಮುಡಾ ಅಧ್ಯಕ್ಷನಾಗಿ ಗಮನಿಸುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಇದರಿಂದ ನಿವೇಶನ ಖರೀದಿಸಿರುವವರು ಪ್ರತಿದಿನ ನಮಲ್ಲಿಗೆ ಬಂದು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಕಲ್ಪಿಸಿಕೊಡಲು ಕೋರುತ್ತಿದ್ದಾರೆ. ಹಾಗಾಗಿ ಯಾರೇ ಡೆವಲಪರ್‌ಗಳಾಗಲಿ, ಬಿಲ್ಡರ್‌ಗಳಾಗಲಿ ನಿಮ್ಮನ್ನು ನಂಬಿ ಬರುವ ಗ್ರಾಹಕರಿಗೆ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಕೊಡಬೇಕೆಂದರು.
ಕ್ರೆಡಾಯ್ ಮೈಸೂರು ಅಧ್ಯಕ್ಷ ಡಿ.ಶ್ರೀಹರಿ ಮಾತನಾಡಿ, ಈ ವರ್ಷದ ಮೈರಿಯಾಲ್ಟಿ ಎಕ್ಸ್‌ಪೋ ಹಿಂದಿನ ವರ್ಷಗಳಿಗಿಂತ ತುಂಬಾ ಚೆನ್ನಾಗಿ ಆಗಿದೆ. ಮೈಸೂರು ನಗರ ಅಭಿವೃದ್ಧಿ ದೃಷ್ಟಿಯಿಂದ ತುಂಬಾ ಚೆನ್ನಾಗಿ, ವ್ಯವಸ್ಥಿತ ರೀತಿಯಲ್ಲಿ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ ಮುಡಾ ಸಭೆ ತಿಂಗಳಲ್ಲಿ ಒಂದೆರಡು ಬಾರಿಯಾದರೂ ಆಗಬೇಕು. ಆಗ ನಮ್ಮಲ್ಲಿ ಯೋಜನೆಗಳು ಜಾಸ್ತಿ ಆಗುತ್ತವೆ ಎಂದು ಹೇಳಿದರು.
ಮೈಸೂರು ಬಿಲ್ಡರ್ಸ್‌ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ಸಿ.ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಮುಂದಿನ ಮೇ ತಿಂಗಳಲ್ಲಿ ಆಯೋಜಿಸಲಿರುವ ಮೈರಿಯಾಲ್ಟಿ ಎಕ್ಸ್‌ಪೋ2025 ಬ್ಯಾನರ್ ಅನ್ನು ಅನಾವರಣಗೊಳಿಸಲಾಯಿತು.
ಮೈರಿಯಾಲ್ಟಿ-2024 ಅಧ್ಯಕ್ಷ ಕೆ.ಎನ್.ರವಿಶಂಕರ್, ಗೌರವ ಕಾರ್ಯದರ್ಶಿ ಅಶ್ವಿನ್ ಪಾಳೇಗಾರ್, ಗೌರವ ಖಜಾಂಚಿ ಕೆ.ಎಸ್.ಪ್ರಕಾಶ್, ಕ್ರೆಡಾಯ್ ಮೈಸೂರು ಕಾರ್ಯದರ್ಶಿ ಅರುಣ್ ಪಂಡಿತ್, ಮೈಸೂರು ಬಿಎಐ ಅಧ್ಯಕ್ಷ ಯೋಗಾನರಸಿಂಹ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net