ಅಂಡರ್​ಪಾಸ್​ ನಿರ್ಮಾಣಕ್ಕೆ ಶೀಘ್ರವೇ ಕ್ರಮ

2
Published on

ಅಂಡರ್​ಪಾಸ್​ ನಿರ್ಮಾಣಕ್ಕೆ ಶೀಘ್ರ ಕ್ರಮ

ಕುಣಿಗಲ್​ನಲ್ಲಿ ಸಂಸದ ಡಾ.ಮಂಜುನಾಥ್​ ಹೇಳಿಕೆ | ಮಳೆಹಾನಿ ಪ್ರದೇಶಗಳ ಪರಿಶೀಲನೆ

ವಿಜಯವಾಣಿ ಸುದ್ದಿಜಾಲ ಕುಣಿಗಲ್​

ತಾಲೂಕಿನ ಶೆಟ್ಟೀಗೆಹಳ್ಳಿಯಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ಈ ಭಾಗದ ಅಡಕೆ ತೋಟಕ್ಕೆ ನೀರು ನುಗ್ಗಿ ಸಾಕಷ್ಟು ಹಾನಿಯಾಗಿದೆ. ಇದನ್ನು ತಡೆಗಟ್ಟಲು ಈ ಭಾಗದಲ್ಲಿ ಅಂಡರ್​ ಪಾಸ್​ ಅವಶ್ಯಕತೆಯಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್​.ಮಂಜುನಾಥ್​ ಹೇಳಿದರು.

ತಾಲೂಕಿನ ಮಳೆಹಾನಿ ಪ್ರದೇಶಕ್ಕೆ ಅಧಿಕಾರಿಗಳೊಂದಿಗೆ ಮಂಗಳವಾರ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿ, ಕುಣಿಗಲ್​ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ&75ರ ಬೈಪಾಸ್​ ಸರ್ವಿಸ್​ ರಸ್ತೆಯಲ್ಲಿ ನೀರು ನಿಲ್ಲುತ್ತಿದೆ. ಶೆಟ್ಟೀಗೆಹಳ್ಳಿ, ಹೇರೂರು, ಚೊಟ್ಟನಹಳ್ಳಿ ಹಾಗೂ ಹಲವಾರು ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿ ಜಲಾವೃತವಾಗಿವೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅಂಡರ್​ ಪಾಸ್​ ಅವಶ್ಯಕತೆಯಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಣ್ಣ ನೀರಾವರಿ, ಹೇಮಾವತಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದು, ಇದಕ್ಕೆ ಪರಿಹಾರ ಕಲ್ಪಿಸುವುದಾಗಿ ತಿಳಿಸಿದರು.

ಈ ಭಾಗದಲ್ಲಿ ಪ್ರತಿವರ್ಷ ಮಳೆಯಾದಾಗ ಆಗುತ್ತಿರುವ ಹಾನಿ ತಡೆಗಟ್ಟಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್​ ಗಡ್ಕರಿ ಅವರಿಗೆ ಪತ್ರ ಬರೆಯಲಾಗುವುದು. ಈ ನಿಟ್ಟಿನಲ್ಲಿ ಸ್ಥಳ ವೀಕ್ಷಣೆಗೆ ಬಂದಿದ್ದೇನೆ ಎಂದು ಸಂಸದರು ತಿಳಿಸಿದರು.

ಯೋಜನಾ ನಿರ್ದೇಶಕ ಹರಿಬಾಬು, ಹೇಮಾವತಿ ಎಇಇ ರವಿ, ಜೆಡಿಎಸ್​ ವಕ್ತಾರ ತರಿಕೆರೆ ಪ್ರಕಾಶ್​, ತಾಲೂಕು ಜೆಡಿಎಸ್​ ಅಧ್ಯ ಬಿ.ಎನ್​.ಜಗದೀಶ್​ ಮತ್ತಿತರರು ಇದ್ದರು.

ಸರ್ವೀಸ್​ ರಸ್ತೆ

ಸುಮಾರು 15 ಕಿಮೀ ಸರ್ವೀಸ್​ ರಸ್ತೆ ಬೇಕೆಂದು ಗ್ರಾಮಸ್ಥರು ತಿಳಿಸಿದ್ದಾರೆ. ಇದರ ಬಗ್ಗೆಯೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತೇನೆ. ರೈಲ್ವೆ ಅಂಡರ್​ ಪಾಸ್​ ಸಮಸ್ಯೆಯೂ ಇದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಸಚಿವರೊಂದಿಗೆ ಮಾತನಾಡಿ ಇದರ ಕಾಮಗಾರಿಗೂ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ದೊಡ್ಡಕೆರೆಯ ಕೋಡಿ ನೀರು ಹರಿಯುವ ಹೇರೂರು ನಾಲೆ ಬಳಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸೇತುವೆ ಮಾಡದೇ ಇರುವುದರಿಂದ ನೀರು ನಾಳೆಯಲ್ಲಿ ಸರಾಗವಾಗಿ ಹರಿಯದೇ, ಜಮೀನುಗಳಿಗೆ ನುಗ್ಗುತ್ತಿದೆ. ಮಳೆಗಾಲದಲ್ಲಿ ರೈತರು ಬೆಳೆಬೆಳೆಯಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸೇತುವೆ ನಿರ್ಮಾಣ ಮಾಡಿಸಿಕೊಡುವಂತೆ ಸಂಸದರಿಗೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಂಸದರು, ಸೂಕ್ತಕ್ರಮಕ್ಕೆ ಅಧಿಕಾರಿಗಳಿಗೆ ಸಂಸದ ಮಂಜುನಾಥ್​ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net