

ವಿಜಯಪುರ: ಬಡ ತಾಯಿಯ ಮಗನೊಬ್ಬ ಜಿಲ್ಲಾಧಿಕಾರಿಯಾಗಲು ಕಂಡ ಕನಸು ನನಸು ಮಾಡಿಕೊಳ್ಳಲು ಸಾಧ್ಯವಾಗಿಸಿದ್ದು ನಮ್ಮ ಭಾರತದ ಸಂವಿಧಾನ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ ಹೇಳಿದರು.
ನಗರದ ಎಕ್ಸಲಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಸಂವಿಧಾನ ಇಲ್ಲದೇ ಹೋಗಿದ್ದರೆ ದೇಶದ ಸ್ಥಿತಿ ಪಾತಾಳ ಗರಡಿಯಂತಾಗುತ್ತಿತ್ತು ಎಂದರು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಬೇರೆ ಬೇರೆ ದೇಶಗಳ ಸಂವಿಧಾನಗಳ ಅಧ್ಯಯನ ನಡೆಸಿ ನಮ್ಮ ದೇಶಕ್ಕೆ ಎಂತಹ ಸಂವಿಧಾನ ಬೇಕು ಎನ್ನುವುದು ತಿಳಿಸಿಕೊಟ್ಟರು. ಅಸ್ಪಶ್ಯತೆಯ ಬೆಂಕಿಯಲ್ಲಿ ಸ್ವತಃ ಬೆಂದಿದ್ದ ಬಾಬಾಸಾಹೇಬರು ಭಾರತದ ಸಂವಿಧಾನ ರಚನೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ನಿಭಾಯಿಸುವುದರ ಜತೆಗೆ ಸಮಾನತೆಯ ಸಂವಿಧಾನ ಜಾರಿಯಾಗಲು ಶ್ರಮಿಸಿದರು. ಇಷ್ಟು ಅದ್ಭುತವಾದ ಸಂವಿಧಾನ ಪಡೆದರೂ ಕೂಡ ಅದರ ಆಶಯವನ್ನು ಪೂರ್ಣಗಳಿಸುವಲ್ಲಿ ಭಾರತೀಯರು ಇನ್ನೂ ಯಶಸ್ವಿಯಾಗುತ್ತಿಲ್ಲ ಎನ್ನುವುದು ಖೇದಕರ ಎಂದರು.
ಇತ್ತೀಚೆಗೆ ಲಂಡನ್‌ನಲ್ಲಿ ಜರುಗಿದ ಪಾರ್ಲಿಮೆಂಟ್ ನಾಯಕತ್ವ ಶೃಂಗ ಸಭೆಯಲ್ಲಿ ಪಾಲ್ಗೊಂಡು ಭಾರತಕ್ಕೆ ಆಗಮಿಸಿದ ವಿಚಾರಗಳನ್ನು ಹಂಚಿಕೊಂಡ ಕೌಲಗಿ, ಒಂದು ಕಾಲದಲ್ಲಿ ಭಾರತವನ್ನು ಬ್ರಿಟಿಷರು ಆಳ್ವಿಕೆ ಮಾಡಿದ್ದರು. ಭಾರತೀಯರನ್ನು ಕೊಳ್ಳೆ ಹೊಡೆದು ಇಂಗ್ಲೆಂಡ್‌ನ್ನು ಶ್ರೀಮಂತ ಮಾಡಿದರು. ಸದ್ಯ ಬದಲಾದ ಕಾಲಘಟ್ಟದಲ್ಲಿ ಆ ದೇಶವನ್ನು ಆಳುವ ಕೆಲಸ ಭಾರತೀಯರು ಮಾಡುತ್ತಿದ್ದಾರೆ. ಇಂತಹ ಸಂಗತಿಗಳನ್ನು ನೋಡಿದರೆ ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರುವಾಗಿ ಮತ್ತೆ ತಲೆ ಎತ್ತುವುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದರು.
ನವಜೀವನ ಬ್ಯಾಂಕ್‌ನ ಮ್ಯಾನೇಜರ್ ವಿ.ಡಿ. ಮಾದನಶೆಟ್ಟಿ, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್., ಮಾತನಾಡಿದರು. ಸಾಹಿತಿ ಮಂಜುನಾಥ ಜುನಗೊಂಡ ಇದ್ದರು. ವಿದೇಶ ಪ್ರವಾಸದಿಂದ ಸ್ವದೇಶಕ್ಕೆ ಆಗಮಿಸಿದ ಬಸವರಾಜ ಕೌಲಗಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ವಿದ್ಯಾರ್ಥಿನಿ ಶೃತಿ ವಾಲೀಕಾರ ಪ್ರಾರ್ಥಿಸಿದರು. ಉಪನ್ಯಾಸಕ ರಮೇಶ ಬಾಗೇವಾಡಿ ಸ್ವಾಗತಿಸಿದರು. ಶರಣಗೌಡ ಪಾಟೀಲ ನಿರೂಪಿಸಿದರು. ರವಿ ಕಲ್ಲೂರಮಠ ವಂದಿಸಿದರು.