

ಶಿವಮೊಗ್ಗ: ಕಾಲಕ್ಕೆ ಅನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಅವಕಾಶವನ್ನು ಅಂಬೇಡ್ಕರ್ ಒದಗಿಸಿದ್ದರು. ಆದರೆ ಅದನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು, ಸ್ವಾರ್ಥ ಸಾಧನೆಗೆ ಮುಂದಾಯಿತು ಎಂದು ಸಾಮಾಜಿಕ ಕಾರ್ಯಕರ್ತ ವಾದಿರಾಜ್ ದೂರಿದರು.
ಜಿಲ್ಲಾ ಬಿಜೆಪಿಯಿಂದ ಗುರುವಾರ ಏರ್ಪಡಿಸಿದ್ದ ಸಂವಿಧಾನ ಸನ್ಮಾನ ಅಭಿಯಾನದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಈವರೆಗೆ ಒಟ್ಟು 106 ಬಾರಿ ಸಂವಿಧಾನಕ್ಕೆ ತಿದ್ದುಪಡಿ ಮಾಡಲಾಗಿದೆ. ಈ ಪೈಕಿ 75 ತಿದ್ದುಪಡಿಗಳು ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲೇ ಆಗಿವೆ. ಬಿಜೆಪಿ ಸೇರಿದಂತೆ ಉಳಿದ ಸರ್ಕಾರಗಳಿದ್ದಾಗ 31 ಬಾರಿ ತಿದ್ದುಪಡಿ ಮಾಡಲಾಗಿದೆ ಎಂದು ವಿವರಿಸಿದರು.
ಅಂಬೇಡ್ಕರ್ ರಚಿಸಿದ ಸಂವಿಧಾನ ಎಲ್ಲ ರಾಜ್ಯಗಳಲ್ಲೂ ಸ್ಥಾಪಿತವಾಗಬೇಕು. ಒಂದೇ ದೇಶದಲ್ಲಿ ಎರಡು ಸಂವಿಧಾನ, ಎರಡು ಧ್ವಜ, ಇಬ್ಬರು ಪ್ರಧಾನಿ ಇರಬಾರದು ಎಂದು ಹೋರಾಟ ನಡೆಸಿದವರು ಜನಸಂಘದ ಸಂಸ್ಥಾಪಕ ಶಾಮ್‌ಪ್ರಸಾದ್ ಮುಖರ್ಜಿ. ಸಂವಿಧಾನ ಉಳಿಸುವ ಹೋರಾಟ ಆಗಲೇ ನಡೆದಿತ್ತು ಎಂದರು.
ವಾಜಪೇಯಿ ಹಾಗೂ ಪ್ರಸ್ತುತ ನರೇಂದ್ರ ಮೋದಿ ಸರ್ಕಾರ ಜನರ ಒಳಿತಿಗಾಗಿ ಸಂವಿಧಾನಕ್ಕೆ ಕೆಲ ತಿದ್ದುಪಡಿಗಳನ್ನು ಮಾಡಿದೆ. ಇಂತಹ ತಿದ್ದುಪಡಿ ಫಲವಾಗಿಯೇ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ಸಿಕ್ಕಿದೆ. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ದೊರೆಯುವಂತಾಗಿದೆ ಎಂದು ತಿಳಿಸಿದರು.