

ಗುಂಡ್ಲುಪೇಟೆ: ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಇಡೀ ದೇಶವೇ ಒಪ್ಪಿಕೊಂಡಿದ್ದು ಅವರನ್ನು ದೇಶವೇ ಗೌರವಿಸುತ್ತಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲು ಸರ್ಕಾರ ಅವರ ಜಯಂತಿಯಂದು ರಜೆ ನೀಡುತ್ತಿದೆ ಹಾಗೂ ಪರಿನಿಬ್ಬಾಣ ದಿನಾಚರಣೆ ಆಚರಿಸಲಾಗುತ್ತಿದೆ. ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣಕ್ಕೆ ಅಗತ್ಯವಾದ ನೆರವು ನೀಡಲಾಗುವುದು ಎಂದು ಹೇಳಿದರು.
ತಹಸೀಲ್ದಾರ್ ಟಿ.ರಮೆಶ್‌ಬಾಬು, ಪುರಸಭೆ ಅಧ್ಯಕ್ಷ ಕಿರಣ್, ಮುಖ್ಯಾಧಿಕಾರಿ ಶರವಣ, ರಾಘವಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಆರ್.ಉಲ್ಲಾಸ್, ಮುಖಂಡರಾದ ಗಿರೀಶ್, ಮುತ್ತಣ್ಣ, ಸೋಮಣ್ಣ, ಸುಭಾಷ್ ಸೇರಿದಂತೆ ಹಲವರು ಇದ್ದರು.
ಗದ್ದಲದ ಗೂಡಾದ ಕಾರ್ಯಕ್ರಮ: ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿದ್ದರೂ ಶಾಸಕ ಗಣೇಶ್ ಪ್ರಸಾದ್ ತುಂಬ ತಡವಾಗಿ ಆಗಮಿಸಿದ್ದು ನೆರೆದಿದ್ದವರ ಸಹನೆ ಕಳೆದುಕೊಳ್ಳುವಂತೆ ಮಾಡಿತ್ತು. ದಲಿತ ಸಂಘರ್ಷ ಸಮಿತಿಯ ಚಿಕ್ಕಣ್ಣ ಎಂಬುವರು ಶಾಸಕರನ್ನು ಕಾರ್ಯಕ್ರಮಕ್ಕೆ ತುಂಬ ತಡವಾಗಿ ಬಂದ ಬಗ್ಗೆ ಪ್ರಶ್ನಿಸಿದ್ದರಿಂದ ಸಿಟ್ಟಿಗೆದ್ದ ಗಣೇಶ್ ಪ್ರಸಾದ್ ನಾನು ಕ್ಷೇತ್ರದಲ್ಲಿಯೇ ಇದ್ದರೂ ಜನರು ತಮ್ಮ ಕೆಲಸ-ಕಾರ್ಯಗಳಿಗೆ ಮೈಸೂರಿನ ಮನೆಗೆ ಬರುವುದರಿಂದ ಅವರನ್ನು ಮಾತನಾಡಿಸಿ ಹೊರಡುವುದು ತಡವಾಯಿತು ಎಂದು ಸಮಜಾಯಿಷಿ ನೀಡಿದರು.
ಈ ವೇಳೆ ಕಾರ್ಯಕ್ರಮವನ್ನು ಬಿಟ್ಟು ಹೊರಹೋಗಲು ಮುಂದಾದ ಗಣೇಶ್ ಪ್ರಸಾದ್ ಅವರನ್ನು ಅಧಿಕಾರಿಗಳು ಮನವೊಲಿಸಿ ವೇದಿಕೆಗೆ ಕರೆದೊಯ್ದರು. ಆದರೆ ಈ ಸಂದರ್ಭದಲ್ಲಿ ಸಹನೆ ಕಳೆದುಕೊಂಡ ಕಾರ್ಯಕರ್ತರು ಗದ್ದಲವುಂಟು ಮಾಡಿದ್ದರಿಂದ ಸಭೆ ಗೊಂದಲದ ಗೂಡಾಗಿ ಪರಿಣಮಿಸಿತು. ಸರ್ಕಲ್ ಇನ್ಸ್‌ಪೆಕ್ಟರ್ ಪರಶಿವಮೂರ್ತಿ ಚಿಕ್ಕಣ್ಣನನ್ನು ಹೊರಗೆ ಎಳೆದುಕೊಂಡು ಹೋದ ನಂತರ ಕಾರ್ಯಕ್ರಮ ಮುಂದುವರಿಸಲಾಯಿತು.
ಸಾಮಾಜಿಕ ಜಾಲತಾಣದಲ್ಲಿ ವೈರಲ್: ಕಾರ್ಯಕ್ರಮದಲ್ಲಿದ್ದ ಕೆಲವರು ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟು, ಅಂಬೇಡ್ಕರ್ ಪರಿನಿಬ್ಬಾಣದ ಕಾರ್ಯಕ್ರಮದಲ್ಲಿ ಶಾಸಕರ ವರ್ತನೆಯನ್ನು ಖಂಡಿಸಿ ಟ್ರೋಲ್ ಮಾಡಿದ್ದಾರೆ.