

ಮಡಿಕೇರಿ: ಪ್ರತಿಯೊಬ್ಬರೂ ತಮ್ಮ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಗಿಡ-ಮರ, ಪ್ರಾಣಿ - ಪಕ್ಷಿಗಳು ಸೇರಿದಂತೆ ಅರಣ್ಯ ಹಾಗೂ ವನ್ಯಜೀವಿಗಳ ಸಂಪತ್ತನ್ನು ಉಳಿಸಿ ಬೆಳೆಸುವ ಮೂಲಕ ಪರಿಸರ ಸಂರಕ್ಷಿಸಬೇಕು. ಪರಿಸರ ಉಳಿದರೆ ಮಾತ್ರ ಮಾನವನ ಉಳಿವು ಸಾಧ್ಯ ಎಂದು ಕೊಡಗು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಹೇಳಿದರು.
ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಅರಣ್ಯ ಭವನದ ಸಮೀಪ ಕೊಡಗು ಅರಣ್ಯ ವೃತ್ತ, ಮಡಿಕೇರಿ ವನ್ಯ ಜೀವಿ ವಿಭಾಗ, ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ವತಿಯಿಂದ "ಸುಸ್ಥಿರ ಪರಿಸರಕ್ಕಾಗಿ ಪ್ರಮುಖ ಜೀವಿಗಳ ಪುನರುತ್ಥಾನ" ಎಂಬ ಘೋಷಣೆಯೊಂದಿಗೆ ಭಾನುವಾರ ಹಮ್ಮಿಕೊಂಡಿದ್ದ ೬೮ನೇ ವನ್ಯ ಜೀವಿ ಸಪ್ತಾಹಕ್ಕೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಾನವನು ಸೇವಿಸುವ ಶುದ್ಧ ಆಮ್ಲಜನಕವನ್ನು ಪೂರೈಸುವ ಗಿಡ ಮರಗಳು ಹಾಗೂ ಸುಂದರ ಪರಿಸರದ ಸಂರಕ್ಷಣೆ ಪ್ರತಿಯೊಬ್ಬರದ್ದಾಗಬೇಕು. ಪ್ರತಿಯೊಬ್ಬರೂ ಸರ್ಕಾರ ಈಗಾಗಲೇ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದ್ದು, ನಾವು ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡುವ ಮೂಲಕ ಜಿಲ್ಲೆಯಲ್ಲಿ ಸ್ವಚ್ಛ ಪರಿಸರ ಕಾಪಾಡುವ ಮೂಲಕ ಜಿಲ್ಲೆಗೆ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಬೇಕಿದೆ ಎಂದರು.
ವನ್ಯಜೀವಿ ಸಪ್ತಾಹದ ಮಹತ್ವ ಕುರಿತು ಮಾತನಾಡಿದ ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ನಿರಂಜನ್ ಮೂರ್ತಿ, ಅ೨ ರಿಂದ ಒಂದು ವಾರ ಕಾಲ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವಿವಿಧ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ವರ್ಷ ಅ೨ ರಿಂದ ೮ ರವರೆಗೆ ರಾಜ್ಯ ಹಾಗೂ ದೇಶಾದ್ಯಂತ ಪ್ರಾಣಿಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸಪ್ತಾಹದ ಮುಖ್ಯ ಉದ್ದೆಶವಾಗಿದೆ. ಗಾಂಧಿ ಜಯಂತಿಯಂದೇ ವನ್ಯ ಜೀವಿ ಸಪ್ತಾಹವೂ ಇರುವುದು ಸ್ವಚ್ಛತೆ ಮತ್ತು ಪ್ರಕೃತಿ ರಕ್ಷಣೆಗೆ ಪೂರಕವಾಗಿದೆ ಎಂದರು.
ವನ್ಯಜೀವಿ ಸಂರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯು ನಮ್ಮ ಆದ್ಯ ಕರ್ತವ್ಯವಾಗಿದೆ. ಭಾರತವು ವೈವಿಧ್ಯಮಯ ವನ್ಯಜೀವಿಗಳ ನೆಲೆಯಾಗಿದ್ದು, ಪಶ್ಚಿಮ ಘಟ್ಟ ಪ್ರದೇಶವು ಜೀವ ವೈವಿಧ್ಯತೆಯ ’ಹಾಟ್ ಸ್ಪಾಟ್’ ಎನಿಸಿದ್ದು, ಇದರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಜಾಥಾದಲ್ಲಿ ಸೈಕ್ಲಿಸ್ಟ್‌ಗಳಾದ ಸೂರತ್ ಮತ್ತು ಪ್ರವೀಣ್ ಬೈಸಿಕಲ್ ಜಾಥಾದಲ್ಲಿ ಸೈಕಲ್ ಸವಾರಿ ಮೂಲಕ ಗಮನ ಸೆಳೆದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರಾಂ ಬಾಬು, ಎ.ಟಿ.ಪೂವಯ್ಯ, ಎಸಿಎಫ್ ಗಳಾದ ಶ್ರೀನಿವಾಸ ನಾಯಕ್, ಮೊಹಿಸಿನ್ ಪಾಷಾ, ಎ.ಎ.ಗೋಪಾಲ್, ಆರ್‌ಎಫ್‌ಓ ಗಳಾದ ವಿಮಲ್ ಬಾಬು, ಕೊಟ್ರೇಶ್, ಕೆ.ವಿ.ಶಿವರಾಂ, ಮಯೂರ್, ಕೆ.ಎನ್.ಡ್ಲ್ಯೂ. ಸಂಸ್ಥೆಯ ಪರಿಸರ ತಜ್ಞ ಎಂ.ರವಿಚಂದ್ರ, ಕನ್ನಡ ಸಾಹಿತ್ಯ ಪರಿಷತ್ತು ಮಡಿಕೇರಿ ತಾಲೂಕು ಅಧ್ಯಕ್ಷ ನವೀನ್ ಅಂಬೇಕಲ್, ಇತರರು ಸೇರಿದಂತೆ ಅರಣ್ಯ ರಕ್ಷಕರು ಇದ್ದರು.
ವಾಕಥಾನ್ ಜಾಥಾ: ಮಡಿಕೇರಿ ನಗರದ ಅರಣ್ಯ ಭವನದ ಆವರಣದಿಂದ ಆರಂಭಗೊಂಡ ಪರಿಸರ ಜಾಥಾ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ, ಜನರಲ್ ತಿಮ್ಮಯ್ಯ ವೃತ್ತ, ಗಾಂಧಿ ಮಂಟಪ,
ನಗರದ ಮಹದೇವಪೇಟೆ ಮೂಲಕ ೪ ಕಿ.ಮೀ.ದೂರ ಕ್ರಮಿಸಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನದಲ್ಲಿ ಸಮಾಪನಗೊಂಡಿತು. ’ವಾಕಥಾನ್’ ಜಾಥಾದಲ್ಲಿ ಸಾಗಿದ ಅಧಿಕಾರಿಗಳು, ಅರಣ್ಯ ರಕ್ಷಕರು, ಸ್ವಯಂ ಸೇವಕರು ಪರಿಸರ ಹಾಗೂ ವನ್ಯಜೀವಿಗಳ ಸಂರಕ್ಷಣೆ ಕುರಿತು ಘೋಷಣೆಗಳನ್ನು ಕೂಗಿದರು.