

ನೆಲಮಂಗಲ: ಇತಿಹಾಸ ಪ್ರಸಿದ್ಧ ದೇವಾಲಯ, ಸ್ಮಾರಕಗಳು ಸೇರಿ ಬೆಟ್ಟಗಳ ಸಂರಕ್ಷಣೆಯಲ್ಲಿ ಸಂಘ-ಸಂಸ್ಥೆಗಳ ಪಾತ್ರ ಮಹತ್ವವಾದದ್ದು ಎಂದು ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ನಗರದ ಚನ್ನಪ್ಪ ಬಡಾವಣೆಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಬಳಿ ಸಿದ್ಧರಬೆಟ್ಟ ಸೇವಾ ಸಮಿತಿ ಭಾನುವಾರ ಆಯೋಜಿಸಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಸಂಸ್ಕೃತಿಯ ಪ್ರತೀಕವಾಗಿರುವ ದೇಗುಲ, ಧಾರ್ಮಿಕ ಸ್ಥಳಗಳನ್ನು ರಕ್ಷಿಸಿ ಮುಂದಿನ ಪೀಳಿಗೆ ಕೊಡುಗೆಯಾಗಿ ನೀಡಬೇಕಿದೆ. 8 ಶತಮಾನಗಳಿಗೂ ಮೀರಿದ ಇತಿಹಾಸ ಸಿದ್ಧರ ಬೆಟ್ಟಕ್ಕಿದೆ. ಬೆಟ್ಟದಲ್ಲಿರುವ ದೇಗುಲಗಳ ಅಭಿವೃದ್ಧಿ ಜತೆಗೆ ಬೆಟ್ಟದ ಪ್ರಾಕೃತಿಕ ಸೌಂದರ್ಯ ಕಾಪಾಡಬೇಕಿದೆ. ಪಾರಂಪರಿಕ ಹಾಗೂ ಸುಂದರ ಪ್ರವಾಸಿ ತಾಣವಾಗಿ ಅದು ಮಾರ್ಪಾಡಾಗಬೇಕಿದೆ. ಕೆಲ ಯುವಕರ ತಂಡ ಹನುಮ ಮಾಲೆ ಧಾರಣೆ ಮಾಡಿ ತಾಲೂಕಿನ ಎಲ್ಲ ಜನತೆಯನ್ನು ಒಗ್ಗೂಡಿಸಿ ಮಾಡುತ್ತಿರುವ ಪಾದಯಾತ್ರೆ ಅರ್ಥಪೂರ್ಣವಾಗಿದೆ ಎಂದರು.
ಪಾದಯಾತ್ರೆ ಆಯೋಜಕ ಎಂ.ಎನ್. ರಾಮ್ ಮಾತನಾಡಿ, ತಾಲೂಕಿನಲ್ಲಿರುವ ಐತಿಹಾಸಿಕ ಧಾರ್ಮಿಕ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಮೊದಲ ಬಾರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಪಕ್ಷ ಮತ್ತು ಜಾತ್ಯಾತೀತ ಪಾದಯಾತ್ರೆಗೆ ಉತ್ತಮ ಸಹಕಾರ ದೊರೆತಿದೆ ಎಂದು ಹೇಳಿದರು.
ನಗರದ ಚನ್ನಪ್ಪ ಬಡಾವಣೆ ಶ್ರೀ ವಿರಾಂಜನೇಯ ಸ್ವಾಮಿ ದೇಗುಲದಿಂದ ದಾಬಸ್‌ಪೇಟೆ ಹೋಬಳಿ ನಿಜಗಲ್ಲು ಗ್ರಾಮದ ಸಿದ್ಧರ ಬೆಟ್ಟದವರೆಗೂ ಅಂದಾಜು 25 ಕಿಮೀ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ನಿಜಗಲ್ಲು ಸಿದ್ಧರಬೆಟ್ಟದ ಇತಿಹಾಸವನ್ನು ನಾಡಿನ ಜನತೆಗೆ ತಿಳಿಸಲು ಪ್ರಯತ್ನಿಸಲಾಗುವುದು. ತಾಲೂಕಿನ ಟಿ. ಬೇಗೂರು, ದಾಬಸ್‌ಪೇಟೆಯಲ್ಲೂ ನೂರಾರು ಸಂಖ್ಯೆಯ ಕಾರ್ಯಕರ್ತರ ಪಾದಯಾತ್ರೆಗೆ ಸೇರ್ಪಡೆಯಾಗಲಿದ್ದಾರೆ ಎಂದರು.
ನಗರಸಭೆ ನಾಮನಿರ್ದೇಶಿತ ಸದಸ್ಯ ವಸಂತ್, ಬಜರಂಗದಳ ಜಿಲ್ಲಾ ಸಹಸಂಯೋಜಕ ಬಿ.ಎಸ್. ಶಶಿಕಿರಣ್, ತಾಲೂಕು ಸಂಯೋಜಕ ವಿನಯ್, ಕಾರ್ಯದರ್ಶಿ ಅರಣ್‌ಕುಮಾರ್, ಬಿಜೆಪಿ ಮಾಧ್ಯಮ ಪ್ರಮುಖ್ ಡಿ.ಸಿದ್ದರಾಜು, ಒಕ್ಕಲಿಗರ ಯುವವೇದಿಕೆ ಅಧ್ಯಕ್ಷ ಬಾಬು, ಮುಖಂಡರಾದ ರಾಜಮ್ಮಪ್ರಕಾಶ್, ಚಂದ್ರಶೆಟ್ಟಿ, ಬಡಾವಣೆ ರಮೇಶ್, ಚಿಕ್ಕಹನುಮಯ್ಯ, ಪುನೀತ್, ಸ್ನೇಕ್‌ರಾಜು, ಎ.ಎಸ್. ರಾಮಮೂರ್ತಿ, ವಕೀಲ ಸುರೇಶ್, ಗಿರೀಶ್, ರಘು, ರವಿಕುಮಾರ್, ಮುನಿರಾಜು ಮತ್ತಿತರರು ಇದ್ದರು.