ಸೋಮವಾರಪೇಟೆ: ಬಿಜೆಪಿ ಸಿದ್ಧಾಂತವನ್ನು ಒಪ್ಪಿಕೊಂಡು ಪಕ್ಷದೊಂದಿಗೆ ಗುರುತಿಸಿಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಐಗೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ, ಗ್ರಾಮೀಣ ಸಹಕಾರ ಸಂಘದ ಉಪಾಧ್ಯಕ್ಷ ಡಿ.ಎಸ್.ಚಂಗಪ್ಪ ಹೇಳಿದರು.
ಸಂಘದ ಚುನಾವಣೆಯಲ್ಲಿ ಜಯಶೀಲರಾದ ಕಾಂಗ್ರೆಸ್ ಬೆಂಬಲಿತ ಸದಸ್ಯರಿಗೆ ಶಾಸಕ ಡಾ. ಮಂತರ್‌ಗೌಡ ಅವರು ಬುಧವಾರ ಸಂಜೆ ಸಂಘದ ಸಭಾಂಗಣದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಶಾಸಕರಿಗೆ ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲು ತೆರಳಿದ್ದ ಸಂದರ್ಭ ಶಾಸಕರು ನನ್ನನ್ನು ಕರೆದು ಸನ್ಮಾನಿಸಿದರು. ಈ ಫೋಟೋವನ್ನು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಹಕಾರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಿದ ಸಂದರ್ಭ ಕಾಂಗ್ರೆಸ್‌ನವರು ನನಗೆ ಬೆಂಬಲ ನೀಡಲಿಲ್ಲ. ಬಿಜೆಪಿ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ನಾನು ಗೆಲವು ಸಾಧಿಸಿ, ಉಪಾಧ್ಯಕ್ಷ ಸ್ಥಾನವನ್ನು ಪಡೆದುಕೊಂಡಿದ್ದೇನೆ. ನಾನು ಬಿಜೆಪಿಗೆ ಚಿರಋಣಿಯಾಗಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಹಕಾರ ಸಂಘದ ಅಧ್ಯಕ್ಷರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಶಾಸಕರಿಗೆ ಮನವಿ ಪತ್ರವನ್ನು ಕೊಡಲು ನನಗೆ ವಹಿಸಿದ್ದರು. ಶಾಸಕರು ಸಮಾರಂಭಕ್ಕೆ ಬರುವವರೆಗೆ ಕಾಯ್ದು ಮನವಿ ಪತ್ರ ಸಲ್ಲಿಸಿದೆ. ಈ ಹಿಂದೆ ಶಾಸಕರು ನನಗೆ ಪರಿಚಯವಿರುವ ಕಾರಣ, ಪ್ರೀತಿಯಿಂದ ಅವರು ನನಗೆ ಸನ್ಮಾನ ಮಾಡಿದ್ದಾರೆ. ಶಾಸಕರು ನನ್ನನ್ನು ಕಾಂಗ್ರೆಸ್‌ಗೆ ಬರಲು ಆಹ್ವಾನವನ್ನೂ ನೀಡಿಲ್ಲ. ಸನ್ಮಾನ ಆ ಸಂದರ್ಭ ಆಕಸ್ಮಿಕವಾಗಿ ನಡೆಯಿತು ಅಷ್ಟೇ ಎಂದ ಅವರು, ಅದನ್ನು ಕಾಂಗ್ರೆಸ್ ಕಾರ್ಯಕರ್ತರು ಅಪಪ್ರಚಾರ ಮಾಡುತ್ತಿರುವುದು ನನಗೆ ಬೇಸರ ಮೂಡಿಸಿದೆ ಎಂದು ಹೇಳಿದರು.
ಬಿಜೆಪಿ ಕೃಷಿ ಮೋರ್ಚಾದ ಸೋಮವಾರಪೇಟೆ ಮಂಡಳ ಅಧ್ಯಕ್ಷ ಮಚ್ಚಂಡ ಪ್ರಕಾಶ್ ಇದ್ದರು.