

ವಿಜಯಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ಸ್ಥಿತಿ ‘ಗುರು ಶಿಷ್ಯರು’ ಚಲನಚಿತ್ರದಂತಾಗಿದ್ದು, ಬುದ್ದಿಹೀನರೆಲ್ಲ ಕೂಡಿಕೊಂಡು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಲೇವಡಿ ಮಾಡಿದರು.
ಗುರುಶಿಷ್ಯರು ಚಲನಚಿತ್ರದಲ್ಲಿ ಶಿಷ್ಯರೆಲ್ಲ ಕೂಡಿ ಸೇವೆಯ ನೆಪದಲ್ಲಿ ಗುರುವಿಗೆ ನೀಡುವ ಚಿತ್ರಹಿಂಸೆಯಂತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಹೆಸರಿನಲ್ಲಿ ಜನರ ಶೋಷಣೆಗೆ ಇಳಿದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಸ್ವಪ್ರತಿಷ್ಠೆಗಾಗಿ ಜನರ ಜೀವವನ್ನೇ ಬಲಿ ತೆಗೆದುಕೊಂಡಿದ್ದಾರೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಜೂ.4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ಸಂದರ್ಭ 11 ಜನ ಮೃತಪಟ್ಟಿದ್ದಾರೆ. ಈ ಸಾವಿಗೆ ಸಿಎಂ ಹಾಗೂ ಡಿಸಿಎಂ ಪ್ರತಿಷ್ಠೆಯೇ ಕಾರಣ. ಘಟನೆಯಲ್ಲಿ ಸತ್ತಿದ್ದು 11 ಜನವಾದರೂ ಅವಲಂಬಿತರು ಸೇರಿ ಒಟ್ಟು 33 ಜನ ಸಾವಿಗೀಡಾದಂತೆಯೇ ಸರಿ. ಆಧಾರ ಸ್ಥಂಬವನ್ನೇ ಕಳೆದುಕೊಂಡ ಆ ಕುಟುಂಬಗಳೆಲ್ಲವೂ ಬೀದಿಗೆ ಬಿದ್ದಿವೆ. ಮಾತ್ರವಲ್ಲ ಸರ್ಕಾರ ತನ್ನ ತಪ್ಪು ಮುಚ್ಚಿಹಾಕಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಅವರನ್ನೂ ನೈತಿಕವಾಗಿ ಕೊಲೆ ಮಾಡಿದೆ ಎಂದರು.
ಪೊಲೀಸ್ ಇಲಾಖೆ ಕಾಂಗ್ರೆಸ್‌ನಿಂದ ಜಾಗರೂಕರಾಗಿರಬೇಕು. ಈ ಸರ್ಕಾರ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳ ಕೊಲೆ ಮಾಡುತ್ತಿದೆ. ನಿಯಮ ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಅದಕ್ಕಾಗಿ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿದೆ. ಇದರಿಂದ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಪೊಲೀಸರಿಗೆ ಕಿವಿಮಾತು ಹೇಳಿದ ಅಂಗಡಿ, ಕಾಂಗ್ರೆಸ್ ಓಲೈಕೆಗೆ ಮುಂದಾಗದೆ, ಶಾಸಕ ಮತ್ತು ಸಚಿವರ ಒತ್ತಾಯಕ್ಕೆ ಮಣಿದು ನಿಯಮ ಉಲ್ಲಂಘಿಸದೇ, ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸದಂತೆ ಕಾನೂನು ಸುವ್ಯಸ್ಥೆ ಕಾಪಾಡಬೇಕು. ಗೋಹತ್ಯೆ ನಿಲ್ಲಿಸಬೇಕು ಎಂದರು.
ಮುಖಂಡ ಎಸ್.ಎ. ಪಾಟೀಲ ಮಾತನಾಡಿ, ಅನುದಾನದ ವಿಚಾರದಲ್ಲಿ ಸಿದ್ದರಾಮಯ್ಯ ಪದೇ ಪದೇ ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅನುದಾನ ಈವರೆಗೆ ಎಂದೂ ಅನ್ಯ ಉದ್ದೇಶಕ್ಕೆ ಬಳಸಿರಲಿಲ್ಲ. ಇದೀಗ ಆ ಅನುದಾನದ ದುರುಪಯೋಗ ಪಡಿಸಿಕೊಂಡಿದ್ದು, ತನ್ನ ವೈಫಲ್ಯ ಮುಚ್ಚಿಹಾಕಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡುವುದು ಯಾವ ನ್ಯಾಯ ಎಂದರು.
ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಲು ಈವರೆಗೂ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುವುದು. ಎಲ್ಲ ನಾಯಕರನ್ನು ಒಳಗೊಂಡು ಚಿಂತನೆ ನಡೆಸಿ ಶೀಘ್ರದಲ್ಲಿಯೇ ರೂಪುರೇಷೆ ಸಿದ್ದಪಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮುಖಂಡರಾದ ವಿಜುಗೌಡ ಪಾಟೀಲ, ಚಂದ್ರಶೇಖರ ಕವಟಗಿ, ಕಾಸುಗೌಡ ಬಿರಾದಾರ, ಉಮೇಶ ಕಾರಜೋಳ, ಸಂಜೀವ ಐಹೊಳೆ, ಈರಣ್ಣ ರಾವೂರ್, ಸಾಬು ಮಾಶಾಳ, ಭರತ್ ಕುಲಕರ್ಣಿ, ಕಾಂತು ಸಿಂಧೆ, ಸಂದೀಪ ಪಾಟೀಲ, ವಿಜಯ ಜೋಶಿ, ಪಾಪುಸಿಂಗ್ ರಜಪೂತ, ಶ್ರೀಹರಿ ಕುಲಕರ್ಣಿ, ಭಾರತಿ ಬುಯ್ಯರ ಮತ್ತಿತರರಿದ್ದರು.