ಮಂತ್ರಿಗಳ ಸ್ಪರ್ಧೆಗೆ ಒಪ್ಪದ ಕೈ ಹೈಕಮಾಂಡ್

Congress
Published on

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೆಲ ಸಚಿವರನ್ನು ಕಣಕ್ಕೆ ಇಳಿಸಬೇಕೆಂಬ ಕೆಪಿಸಿಸಿ ಪ್ರಸ್ತಾವನೆಗೆ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿಲ್ಲ. ಒಂಭತ್ತು ಸಚಿವರು ಹಾಗೂ ಕೆಲ ಹಿರಿಯ ಶಾಸಕರನ್ನು ಕಣಕ್ಕೆ ಇಳಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಗೆಲ್ಲಿಸಿಕೊಳ್ಳಬಹುದೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೈಕಮಾಂಡ್​ಗೆ ವರದಿ ಸಲ್ಲಿಸಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ವ್ಯತಿರಿಕ್ತವಾದ ಮಾಹಿತಿಯನ್ನು ವರಿಷ್ಠರೊಂದಿಗೆ ಹಂಚಿಕೊಂಡಿದ್ದರು.

ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ.ಎಚ್. ಮುನಿಯಪ್ಪ, ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಕೆ.ಎನ್. ರಾಜಣ್ಣ, ಬಿ. ನಾಗೇಂದ್ರ, ರಾಮಲಿಂಗಾರೆಡ್ಡಿ, ಜಮೀರ್ ಅಹಮದ್, ಕೃಷ್ಣ ಬೈರೇಗೌಡ, ಈಶ್ವರ ಖಂಡ್ರೆ, ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೀಗೆ ಹಲವರ ಹೆಸರು ರಾಜಕೀಯ ವಲಯದಲ್ಲಿ ಹರಿದಾಡಿದ್ದವು. ಹಿಂದೆ 1996ರಲ್ಲಿ ಜನತಾದಳ ಸರ್ಕಾರ ಅಧಿಕಾರದಲ್ಲಿದ್ದಾಗ ಕೆಲ ಸಚಿವರು ಹಾಗೂ ಶಾಸಕರನ್ನು ಕಣಕ್ಕೆ ಇಳಿಸಿ 16 ಸ್ಥಾನಗಳನ್ನು ಗೆಲ್ಲಲಾಗಿತ್ತು. ಎಚ್.ಡಿ. ದೇವೇಗೌಡರು ಪ್ರಧಾನಿಯೂ ಆದರು. ಅದೇ ಮಾದರಿಯನ್ನು ಅನುಸರಿಸಬೇಕು ಎಂಬುದು ಹೈಕಮಾಂಡ್​ಗೆ ಶಿವಕುಮಾರ್ ನೀಡಿದ ಸಲಹೆಯಾಗಿತ್ತು.

ಸಂಬಂಧಿಕರು, ಆಪ್ತರು: ಸಮರ್ಥ ಅಭ್ಯರ್ಥಿ ಲಭ್ಯವಾಗದ ಕಡೆಯಲ್ಲಿ ಸಂಬಂಧಿಕರು ಅಥವಾ ಆಪ್ತರನ್ನು ಕಣಕ್ಕೆ ಇಳಿಸಲು ಸಚಿವರಿಗೆ ಅವಕಾಶ ಇದೆ. ಒಟ್ಟಾರೆ ಅಭ್ಯರ್ಥಿ ಯಾರು ಎಂಬುದಕ್ಕಿಂತ ಗೆಲುವು ಮಾತ್ರ ಮಾನದಂಡವಾಗಬೇಕು ಎಂಬುದು ವರಿಷ್ಠರ ಅಭಿಲಾಷೆಯಾಗಿದೆ. ಲಭ್ಯ ಮಾಹಿತಿ ಪ್ರಕಾರ ಸಚಿವ ದಿನೇಶ್ ಗುಂಡೂರಾವ್ ಪತ್ನಿ ಟಬು ಹೆಸರು ಬೆಂಗಳೂರು ಸೆಂಟ್ರಲ್​ಗೆ, ರಾಮಲಿಂಗಾರೆಡ್ಡಿ ಪುತ್ರಿ ಸೌಮ್ಯರೆಡ್ಡಿ ಹೆಸರು ಬೆಂಗಳೂರು ದಕ್ಷಿಣ, ಈಶ್ವರ ಖಂಡ್ರೆ ಸಹೋದರ ಬೀದರ್​ಗೆ, ಎಂಬಿ ಪಾಟೀಲ್ ಆಪ್ತರೊಬ್ಬರು ಬಾಗಲಕೋಟೆಗೆ, ಚಾಮರಾಜನಗರಕ್ಕೆ ಮಹದೇವಪ್ಪ ಪುತ್ರ ಸುನಿಲ್ ಬೋಸ್, ಮೈಸೂರಿಗೆ ಯತೀಂದ್ರ ಸಿದ್ದರಾಮಯ್ಯ, ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಆಪ್ತರಿಗೆ ಅವಕಾಶ ಸಿಗಲಿದೆ. ಒಬ್ಬರು ಲಿಂಗಾಯತ ಹಾಗೂ ಒಬ್ಬರು ಕುರುಬರನ್ನು ಆಯ್ಕೆ ಮಾಡಲು ಜಾರಕಿಹೊಳಿ ಆಸಕ್ತರಾಗಿದ್ದಾರೆ. ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಹೆಸರಿದೆ, ಆದರೆ ಶಾಮನೂರು ಆಪ್ತ ಮಂಜಪ್ಪ ಅವರನ್ನು ಮತ್ತೊಮ್ಮೆ ಕಣಕ್ಕೆ ಇಳಿಸುವ ಬಗ್ಗೆ ಕುಟುಂಬದಲ್ಲಿ ಚರ್ಚೆಯಾಗಿದೆ. ಈ ನಡುವೆ ವಿನಯ್ಕುಮಾರ್ ಬಿರುಸಿನಿಂದ ಓಡಾಡುತ್ತಿದ್ದಾರೆ. ಈ ರೀತಿಯಲ್ಲಿ ಸಚಿವರ ಆಪ್ತರ ಹಾಗೂ ಸಂಬಂಧಿಕರ ಹೆಸರು ಕೇಳಿ ಬರುತ್ತಿವೆ. ಆದರೆ, ಯುವಮುಖಗಳಿಗೆ ಹೆಚ್ಚಿನ ಆದ್ಯತೆಯಂತೂ ಸಿಗಲಿದೆ ಎಂದು ಹೇಳಲಾಗುತ್ತಿದೆ.

ರಾಹುಲ್ ನಕಾರ

ಸಚಿವರನ್ನು ಚುನಾವಣೆ ಕಣಕ್ಕೆ ಇಳಿಸುವುದನ್ನು ಕಾಂಗ್ರೆಸ್ ನಾಯಕ ಸುತಾರಾಂ ಒಪ್ಪಿಲ್ಲ. ಸಚಿವರು ಸ್ಪರ್ಧೆಗೆ ಇಳಿದರೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡುವವರು ಯಾರು ಎಂಬ ಪ್ರಶ್ನೆಯನ್ನು ರಾಹುಲ್ ಇಟ್ಟಿದ್ದಾರೆ. ಸಚಿವರು ಚುನಾವಣೆಯಲ್ಲಿ ಕೆಲಸ ಮಾಡುವ ಮೂಲಕ ಹೆಚ್ಚು ಜನರನ್ನು ಗೆಲ್ಲಿಸಿಕೊಂಡು ಬರುವ ಗುರಿ ನೀಡಬೇಕು ಎಂದು ರಾಹುಲ್ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸಚಿವರ ಸ್ಪರ್ಧೆ ಬೇಡ, ಬೇರೆ ಸಮರ್ಥ ಅಭ್ಯರ್ಥಿಗಳನ್ನು ಸಮೀಕ್ಷೆಯ ಮೂಲಕ ಹುಡುಕೋಣ ಎಂಬ ಸಲಹೆಯನ್ನು ಹೈಕಮಾಂಡ್​ಗೆ ನೀಡಿದ್ದರೆಂದು ಹೇಳಲಾಗಿದೆ.

ಸಚಿವರಿಗೆ ಟಾರ್ಗೆಟ್

ಸಮರ್ಥ ಅಭ್ಯರ್ಥಿ ಗಳನ್ನು ಆಯ್ಕೆ ಮಾಡುವುದರೊಂದಿಗೆ ಅವರನ್ನು ಗೆಲ್ಲಿಸಿಕೊಂಡು ಬರುವ ಹೊಣೆಯನ್ನು ಹೈಕಮಾಂಡ್ ಸಚಿವರಿಗೆ ನೀಡುತ್ತಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲೇಬೇಕು ಎಂಬುದು ಹೈಕಮಾಂಡ್​ನ ಸೂಚನೆಯಾಗಿದೆ. ಅದಕ್ಕೆ ತಕ್ಕಂತೆ ಈಗ ಸಚಿವರು ಸಜ್ಜಾಗಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net