ಕ್ರೈಂ ಸ್ಟೇಟ್ ಮಾಡಲು ಹೊರಟ ಕಾಂಗ್ರೆಸ್ ಸರ್ಕಾರ

c t ravi new (1)
ಸಿ.ಟಿ. ರವಿ
Published on

ಚಿಕ್ಕಮಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಕರ್ನಾಟಕವನ್ನು ಕ್ರೈಂ ಸ್ಟೇಟ್ ಆಗಿ ಬದಲಿಸಲು ಹೊರಟಿದೆ. ಇಂಥವರು ಚೊಂಬಿನ ಜಾಹೀರಾತು ನೀಡುವ ಬದಲು ಕೊಳ್ಳಿ ಹಿಡಿದುಕೊಂಡು ಹೋಗುವ ಮಡಕೆ ಜಾಹೀರಾತು ನೀಡಬೇಕು ಎಂದು ಮಾಜಿ ಸಚಿವ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದಿನೇ ದಿನೇ ಕೊಲೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಕಾಂಗ್ರೆಸ್ ಹೆಣ ತೆಗೆದುಕೊಂಡು ಹೋಗುವಾಗ ಇರುವ ಮಡಕೆ ಜಾಹೀರಾತು ನೀಡುವುದೇ ಲೇಸು ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ಸಿಗರು ಬಿಜೆಪಿ ಬಗ್ಗೆ ಚೊಂಬಿನ ಜಾಹೀರಾತು ನೀಡುತ್ತಿದ್ದಾರೆ. ಆದರೆ ಜನ ಕಾಂಗ್ರೆಸ್ಸಿಗರಿಗೆ ಚೊಂಬು ನೀಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ತಾನ, ಛತ್ತಸ್‌ಘಡ ಎಲ್ಲೆಡೆಯೂ ಜನ ಕಾಂಗ್ರೆಸ್‌ಗೆ ಚೊಂಬು ಕೊಟ್ಟಿದ್ದಾರೆ. ಉತ್ತರ ಪ್ರದೇಶದ 387 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಠೇವಣಿ ತೆಗೆದಿದ್ದಾರೆ. ಇದು ಕಾಂಗ್ರೆಸ್ಸಿಗರಿಗೆ ಜನ ಕೊಟ್ಟಿರುವ ಚೊಂಬಿನ ಲಕ್ಷಣ ಎಂದು ವ್ಯಂಗ್ಯವಾಡಿದರು.
ಇದೀಗ ಕಾಂಗ್ರೆಸ್ ಜನರಿಗೆ ಆಸೆ ತೋರಿಸಿ ಅಪಪ್ರಚಾರ ಮಾಡುವ ಕೆಲಸ ಮಾಡುತ್ತಿದೆ. ಈ ಮೂಲಕ ಜನರ ಕೈಗೆ ಚೊಂಬು ಕೊಡಲು ಹೊರಟಿದ್ದಾರೆ. ಬೆಂಗಳೂರಿನಲ್ಲಿ ತೊಳೆದುಕೊಳ್ಳಲು ನೀರಿಲ್ಲ. ಆ ಖಾಲಿ ಚೊಂಬು ಕಾಂಗ್ರೆಸ್ಸಿನದ್ದು. ನಾವು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಮೂಲಕ ಕಳಸ ಕೊಟ್ಟಿದ್ದೇವೆ. 45 ಕೋಟಿ ಬಡವರನ್ನು ಬ್ಯಾಂಕ್‌ನ ಜತೆ ಜೋಡಿಸಿ ಅವರ ಬದುಕಿಗೆ ಕಳಸ ಇಟ್ಟಿದ್ದೇವೆ. ಯಾರಿಗೆ ಕಾಮಾಲೆ ಕಣ್ಣು ಇಲ್ಲವೋ ಅವರಿಗೆ ಅಚ್ಚೆ ದಿನ್ ಕಾಣುತ್ತದೆ. ಆದರೆ ಕಾಂಗ್ರೆಸ್‌ಗೆ ಕಾಮಾಲೆ ಕಣ್ಣು. ಹಾಗಾಗಿ ಯಾವ ಒಳ್ಳೆಯದು ಅವರಿಗೆ ಕಾಣುವುದಿಲ್ಲ. ಕಾಂಗ್ರೆಸ್ ಎಂದರೆ ಹಗರಣ ಹಾಗೂ ಭ್ರಷ್ಟಾಚಾರ. 12 ಲಕ್ಷ ಕೋಟಿ ಲೂಟಿ ಹೊಡೆದವರು ಜೈಲು ಮತ್ತು ಬೇಲ್‌ನಲ್ಲಿ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net