ಸಂವಿಧಾನದ ಆಶಯಗಳನ್ನು ಈಡೇರಿಸಿದ ಕಾಂಗ್ರೆಸ್‌ ಸರ್ಕಾರ

Republic-Day
Published on

ಕಾರವಾರ: ಗ್ಯಾರಂಟಿ ಯೋಜನೆಗಳನ್ನು ನಮ್ಮ ಸರ್ಕಾರ ಜಾರಿ ಮಾಡಿ, ಸಾಮಾನ್ಯ ಜನರು ನೆಮ್ಮದಿಯಿಂದ ಜೀವನ ಮಾಡುವಂತೆ ಮಾಡುವ ಮೂಲಕ ಸಂವಿಧಾನದ ಆಶಯಗಳನ್ನು ಈಡೇರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಆಯೋಜಿಸಿದ ಗಣರಾಜ್ಯೋತ್ಸವ ಸಮಾರಂವಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದಲೇ ಸಾಮಾನ್ಯ ವ್ಯಕ್ತಿಯೊಬ್ಬ ನಾಯಕನಾಗಿ ಬೆಳೆಯಲು ಸಾಧ್ಯವಾಗಿದೆ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಡಿಎಆರ್‌ಆರ್ ಪಿಐ ಫಕೀರಪ್ಪ ಆರ್.ಜಕ್ಕಣ್ಣವರ್ ಅವರ ನೇತೃತ್ವದಲ್ಲಿ ಪೊಲೀಸ್, ಗೃಹರಕ್ಷಕ, ಅರಣ್ಯ, ಎನ್‌ಸಿಸಿ ಸೇರಿ 15 ತಂಡಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಅದಕ್ಕೂ ಪೂರ್ವದಲ್ಲಿ ಸಚಿವರು ತೆರೆದ ವಾಹನದಲ್ಲಿ ತೆರಳಿ ತಂಡಗಳ ಸಿದ್ಧತೆ ವೀಕ್ಷಿಸಿದರು. ಶಾಸಕ ಸತೀಶ ಸೈಲ್, ಎಂಎಲ್‌ಸಿ ಗಣಪತಿ ಉಳ್ವೆಕರ್, ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿಪಂ ಸಿಇಒ ಈಶ್ವರ ಕಾಂದೂ, ಎಸ್‌ಪಿ ಎನ್.ವಿಷ್ಣುವರ್ಧನ, ಎಸಿ ಕನಿಷ್ಕ, ಕರ್ನಾಟಕ ಮೆರಿಟೈಮ್ ಬೋರ್ಡ್ ಸಿಇಒ ಜಯರಾಮ್ ವೇದಿಕೆಯಲ್ಲಿದ್ದರು.
ಎಸ್ ಎಸ್ ಎಲ್ ಸಿಯಲ್ಲಿ ಅಽಕ ಅಂಕ ಗಳಿಸಿದ ಕಾರ್ಮಿಕರ ಮಕ್ಕಳಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಉಚಿತ ಲ್ಯಾಪ್ ಟಾಪ್ ವಿತರಿಸಲಾಯಿತು. ರಾಜ್ಯ ಮಟ್ಟದ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ಪಡೆದ ಬಸವರಾಜ ಗೌಡರ್, ನೇತ್ರಾವತಿ ರಾಮಚಂದ್ರ ಹೆಗಡೆ, ಶಾಂತಾರಾಮ ಗಣೇಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯನ್ನು ಸಮರ್ಪಕವಾಗಿ ಬಳಸಿದ ಅಂಕೋಲಾ ತಾಲೂಕು ಆಸ್ಪತ್ರೆ,ಸಮುದಾಯ ಆರೋಗ್ಯ ಕೇಂದ್ರ ಪಾಳ, ಬೆಳವಟಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹೊನ್ನಾವರದ ಶ್ರೀದೇವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸೇಂಟ್ ಇಗ್ನೇಷಿಯಸ್ ಆಸ್ಪತ್ರೆಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಿದ್ದಿ ಸಮುದಾಯಕ್ಕೆ ಪೌಷ್ಟಿಕ ಆಹಾರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಗ್ಯಾರಂಟಿ ಯೋಜನೆಯನ್ನು ಉತ್ತಮವಾಗಿ ಜಾರಿಗೆ ತಂದ ಮೂರು ಗ್ರಾಮ ಒನ್ ನಿರ್ವಾಹಕರನ್ನು ಸನ್ಮಾನಿಸಲಾಯಿತು. ಅಲ್ಲದೆ, ಕ್ರೀಡೆಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ತ್ರಿಶಾ ದೇವಡಿಗ, ರವಿ ಈಶ್ವರ ಮರಾಠಿ, ಶ್ರೀಷ ಮೊಗೇರ, ಅಹಾನಾ ನಾಯ್ಕ, ಅನನ್ಯಾ, ಆರಾಧ್ಯ, ಸಾಚಿ ಸೈಲ್ ಹಾಗೂ ರಾಜ್ಯ ಸ್ಕೇಟಿಂಗ್ ಹಾಕಿ ತಂಡದ ತರಬೇತುದಾರ ದಿಲೀಪ ಹಣಬರ್ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net