ಜನವರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನ

YATNAL
ಬಸನಗೌಡ ಪಾಟೀಲ ಯತ್ನಾಳ, ಶಾಸಕ
Published on

ಹುಬ್ಬಳ್ಳಿ: ಬರುವ ಜನವರಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಕಾಂಗ್ರೆಸ್​ನವರೇ ಸರ್ಕಾರವನ್ನು ಬೀಳಿಸಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇ ನೇರವಾಗಿ ಸಿಎಂ ಆಗಬಹುದು ಎಂದು ಪ್ರತಿಪಕ್ಷ ನಾಯಕನನ್ನು ಇದುವರೆಗೆ ಆಯ್ಕೆ ಮಾಡಿಲ್ಲ. ನಮ್ಮ ಪಕ್ಷದವರೇ ಸಿಎಂ ಯಾಕಾಗಬಾರದು? ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ ಅವರಿಗೆ ನೋವಿದೆ. ಹಾಗಾಗಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹರಿಪ್ರಸಾದ್ ಯಾರ ಕುಮ್ಮಕ್ಕಿನಿಂದ ಮಾತನಾಡುತ್ತಿದ್ದಾರೆ? ‘ವೇಟಿಂಗ್ ಸಿಎಂ’ ಕುಮ್ಮಕ್ಕಿನಿಂದ ಅಸಮಾಧಾನ ಹೊರಹಾಕಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಈ ತಂತ್ರ ನಡೆಸಿದ್ದಾರೆ. ಹರಿಪ್ರಸಾದ ಅವರನ್ನು ಕೇವಲ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಇದೆಲ್ಲವನ್ನು ಗಮನಿಸಿದರೆ ಜನವರಿಯಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುವುದು ಖಚಿತ ಎಂದರು.

ಕಾಂಗ್ರೆಸ್​ನವರು ಆಪರೇಷನ್ ಹಸ್ತ ಮಾಡುತ್ತಿದ್ದಾರೆ. ನಮ್ಮ ಸಂಪರ್ಕದಲ್ಲಿಯೂ 45 ಶಾಸಕರು ಇದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರ ಹೈಕಮಾಂಡ್​ಗೆ ಬಿಟ್ಟದ್ದು. ನಾವು ರಾಜ್ಯ ರಾಜಕಾರಣದ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತೇವೆ. ಮೈತ್ರಿ ಬಗ್ಗೆ ಯಡಿಯೂರಪ್ಪ ಅವರಿಗೆ ಮಾಹಿತಿ ಇರಬಹುದು. ಆದಷ್ಟು ಬೇಗ ಮೈತ್ರಿ ಕುರಿತು ಅಂತಿಮ ತೀರ್ವನವಾಗುತ್ತದೆ. ಪ್ರತಿ ಲೋಕಸಭಾ ಕ್ಷೇತ್ರವೂ ಅತ್ಯಂತ ಮಹತ್ವದ್ದು. ಒಂದು ಮತದಿಂದ ವಾಜಪೇಯಿ ಸರ್ಕಾರ ಪತನವಾಗಿತ್ತು. ಹೀಗಾಗಿ ನಾವು ಯಾವುದನ್ನೂ ಸುಲಭವಾಗಿ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದರು.

ಕಾಂಗ್ರೆಸ್​ನಲ್ಲಿ ಅಸಮಾಧಾನ ಹೆಚ್ಚಿದೆ. ಅದು ಯಾವಾಗ ಸ್ಪೋಟವಾಗುತ್ತದೋ ಗೊತ್ತಿಲ್ಲ. ಹೀಗಿರುವಾಗ ನಮ್ಮವರನ್ನು ಸೆಳೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಬಿಜೆಪಿ ಗಿರಾಕಿಗಳನ್ನು ತೆಗೆದುಕೊಂಡು ಇವರು ಏನು ಮಾಡುತ್ತಾರೆ? ಯಾರಾದರೂ ಬಿಜೆಪಿ ಬಿಟ್ಟು ಹೋದರೆ ತಾವಾಗಿಯೇ ಮರಣ ಶಾಸನ ಬರೆದುಕೊಂಡಂತೆ ಎಂದರು.

* ಗಣೇಶೋತ್ಸವಕ್ಕೆ ಅನುಮತಿ ನೀಡಿದ್ದು ಖುಷಿ ವಿಚಾರ

ಹಿಂದುಗಳಿಗೆ ಅವಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಆದರೂ ನ್ಯಾಯಾಲಯವು ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದೆ. ಇದರಿಂದ ಖುಷಿಯಾಗಿದೆ ಎಂದು ಯತ್ನಾಳ ಹೇಳಿದರು.

ನಾವು ಪಾಕಿಸ್ತಾನ ಪರ ಘೊಷಣೆ ಹಾಕುತ್ತೀವಿ, ಶೋಕಾಚರಣೆ ಮಾಡ್ತೀವಿ ಎಂದರೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಮೈದಾನ ಅವರಪ್ಪನ ಆಸ್ತಿ ಅಲ್ಲ, ದೇಶದ ಆಸ್ತಿ. ಸುಮ್ಮನೆ ನಮಾಜ್ ಮಾಡಲು ಅವಕಾಶ ಕೊಟ್ಟಿದೆ. ಏನಾದರೂ ಮಾಡಿದರೆ ಸರ್ಕಾರ ಕ್ರಮ ಕೈಗೊಳ್ಳಬೇಕು. ಸರ್ಕಾರ ಅವರಿಗೆ ಸಹಕಾರ ಕೊಟ್ಟರೆ ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಜಗದೀಶ ಶೆಟ್ಟರ್ ಅವರು ಬಿಜೆಪಿಗಾಗಿ ದುಡಿದವರೂ ಅಲ್ಲ, ದುಃಖಪಟ್ಟವರೂ ಅಲ್ಲ. ಅನಿವಾರ್ಯ ಕಾರಣದಿಂದ ಅವರು ಮಂತ್ರಿ-ಮುಖ್ಯಮಂತ್ರಿಯೂ ಆದರು. ಮುಖ್ಯಮಂತ್ರಿ ಆಗಿಯೂ ದುರ್ದೈವದಿಂದ ಮಂತ್ರಿ ಆದರು. ಬಿಜೆಪಿಗೆ ಬೈಯೋಕೆ ಅವರಿಗೆ ನೈತಿಕತೆ ಇಲ್ಲ. ಯಾವ ಲಿಂಗಾಯತರೂ ಅವರ ಜತೆಗಿಲ್ಲ. ಜಗದೀಶ ಶೆಟ್ಟರ್ ಅವರ ಬಹಳ ಹಗರಣಗಳಿವೆ. ತನಿಖೆ ಮಾಡುತ್ತೇವೆ.

-ಬಸನಗೌಡ ಪಾಟೀಲ ಯತ್ನಾಳ, ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net