ಮಹಿಳೆಯರಿಬ್ಬರನ್ನು ಬಸ್​ನಿಂದ ಕೆಳಗಿಳಿಸಿದ ನಿರ್ವಾಹಕ

ylp strike
Published on

ಯಲ್ಲಾಪುರ: ಒಣಮೆಣಸು ಒಯ್ಯುತ್ತಿದ್ದ ಕಾರಣಕ್ಕಾಗಿ ಇಬ್ಬರು ಮಹಿಳೆಯರನ್ನು ನಿರ್ವಾಹಕ ಬಸ್​ನಿಂದ ಕೆಳಗಿಳಿಸಿ ಹೋದ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮಾಗೋಡಿನ ಲಲಿತಾ ಭಾಗ್ವತ ಹಾಗೂ ಮಂಗಲಾ ನಾಯ್ಕ ಎಂಬ ಮಹಿಳೆಯರು ವಾರದ ಸಂತೆಯಲ್ಲಿ ಖರೀದಿಸಿದ ಅರ್ಧ ಕೆ.ಜಿ. ಒಣಮೆಣಸಿನ ಚೀಲದೊಂದಿಗೆ ಮಾಗೋಡ ಬಸ್​ನಲ್ಲಿ ಕುಳಿತಿದ್ದರು. ಇದನ್ನು ಗಮನಿಸಿದ ನಿರ್ವಾಹಕ ಬಸವರಾಜ, ನಿಯಮದ ಪ್ರಕಾರ ಬಸ್​ನಲ್ಲಿ ಒಣಮೆಣಸು ಒಯ್ಯುವಂತಿಲ್ಲ ಎಂದು ತಕರಾರು ಮಾಡಿ, ಇಬ್ಬರೂ ಮಹಿಳೆಯರನ್ನು ಬಸ್​ನಿಂದ ಇಳಿಸಿದ್ದಾರೆ. ಈ ಬಗ್ಗೆ ಸಂಚಾರ ನಿಯಂತ್ರಕರಲ್ಲಿ ದೂರಿದಾಗ, ಮಹಿಳೆಯರನ್ನು ಬಸ್​ನಲ್ಲಿ ಕರೆದೊಯ್ಯುವಂತೆ ಸೂಚನೆ ನೀಡಿದರೂ, ಮೇಲಧಿಕಾರಿಯ ಮಾತಿಗೂ ಮನ್ನಣೆ ನೀಡದ ನಿರ್ವಾಹಕ, ಮಹಿಳೆಯರನ್ನು ಬಿಟ್ಟು ಹೋಗಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ನಂದೊಳ್ಳಿ ಗ್ರಾಪಂ ಸದಸ್ಯ ನರಸಿಂಹ ಕೋಣೆಮನೆ, ಮಹಿಳೆಯರಿಗಾದ ಅನ್ಯಾಯ ಖಂಡಿಸಿ ಸಂಚಾರ ನಿಯಂತ್ರಕರ ಕೊಠಡಿಯಲ್ಲಿ ಧರಣಿ ಆರಂಭಿಸಿದರು. ಮಾನವೀಯತೆ ಮರೆತು ವರ್ತಿಸಿದ ನಿರ್ವಾಹಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.

ಮಾಗೋಡಿನಿಂದ ಮರಳಿ ಯಲ್ಲಾಪುರಕ್ಕೆ ಬಸ್ ಬರುತ್ತಿದ್ದಂತೆ ನಿರ್ವಾಹಕ ಬಸವರಾಜ ವಿರುದ್ಧ ಗ್ರಾಮಸ್ಥರು ಮುಗಿಬಿದ್ದರು. ವಿನಾಯಕ ನಾಯ್ಕ ಉದ್ದಾತಗ್ಗು, ಮಾದೇವ ಹೆಗಡೆ ಇತರರು ನಿರ್ವಾಹಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇಂತಹ ನಿಯಮಗಳಿದ್ದರೆ ಅದರ ಕುರಿತು ಮೊದಲೇ ಮಾಹಿತಿ ಫಲಕ ಅಳವಡಿಸಬೇಕು. ಒಣಮೆಣಸನ್ನು ಬಸ್​ನಲ್ಲಿ ಒಯ್ಯಬಾರದೆಂಬ ಆದೇಶದ ಪ್ರತಿ ತೋರಿಸುವಂತೆ ಪಟ್ಟು ಹಿಡಿದರು.

ಸ್ಥಳಕ್ಕಾಗಮಿಸಿದ ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್ ಘಟನೆಯ ಮಾಹಿತಿ ಪಡೆದು, ನಿರ್ವಾಹಕರ ವಿರುದ್ಧ ಚಾರ್ಜ್​ಶೀಟ್ ಹಾಕಿ, ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ನಿರ್ವಾಹಕರ ಕಾರಣದಿಂದ ಮಹಿಳೆಯರು ಮನೆಗೆ ಹೋಗಲು ಎರಡು ತಾಸು ವಿಳಂಬವಾಗಿದೆ. ಅವರನ್ನು ಮನೆಗೆ ಕಳುಹಿಸಲು ಅಧಿಕಾರಿಗಳೇ ವ್ಯವಸ್ಥೆ ಮಾಡಬೇಕೆಂದು ನರಸಿಂಹ ಕೋಣೆಮನೆ ಒತ್ತಾಯಿಸಿದರು. ಕೊನೆಗೆ ಮಾಗೋಡಿಗೆ ಬಿಡುವ ಬಸ್ ಅನ್ನು ಮುಂಚಿತವಾಗಿಯೇ ಬಿಟ್ಟು ಮಹಿಳೆಯರನ್ನು ಮೆಣಸಿನ ಚೀಲದೊಂದಿಗೆ ಮನೆಗೆ ಕಳುಹಿಸಲಾಯಿತು. ಗಲಾಟೆ ಮಾಡಿ ಕೆಳಕ್ಕಿಳಿಸಿದ ನಿರ್ವಾಹಕರೇ ಮಹಿಳೆಯರನ್ನು ಮತ್ತೆ ಅದೇ ಬಸ್​ನಲ್ಲಿ ಕರೆದೊಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net