ಕೊಡಗಿನ ಯೋಧನ ಸ್ಥಿತಿ ಚಿಂತಾಜನಕ

27ss1Divin
ಯೋಧ ಪಿ.ಪಿ.ದಿವಿನ್
Published on

ಶನಿವಾರಸಂತೆ: ಜಮ್ಮು ಕಾಶ್ಮೀರದ ಪೂಂಚ್ ಬಳಿ ಬುಧವಾರ ನಸುಕಿನಲ್ಲಿ ಭಾರತೀಯ ಸೇನೆಯ ವಾಹನ ಪ್ರಪಾತಕ್ಕೆ ಉರುಳಿ ವಾಹನದಲ್ಲಿದ್ದ 10 ಯೋಧರ ಪೈಕಿ ರಾಜ್ಯದ ಮೂವರು ಮತ್ತು ಮಹಾರಾಷ್ಟ್ರದ ಇಬ್ಬರು ಯೋಧರು ಸೇರಿದಂತೆ ಒಟ್ಟು ಐವರು ಯೋಧರು ದುರಂತದಲ್ಲಿ ಮಡಿದಿದ್ದಾರೆ. ದುರಂತದಲ್ಲಿ ತೀವ್ರವಾಗಿ ಗಾಯಗೊಂಡವರ ಪೈಕಿ ಕೊಡಗಿನ ಯೋಧನೂ ಇದ್ದಾರೆ.

ದುರಂತದಲ್ಲಿ ವಾಹನ ಚಾಲಕ ಸೇರಿದಂತೆ ಐವರು ಯೋಧರ ಸ್ಥಿತಿ ಚಿಂತಾಜನಕವಾಗಿದ್ದು ಜಮ್ಮುವಿನ ಉದಮಪುರ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಗೊಂಡವರ ಈ ಪೈಕಿ ಕೊಡಗಿನ ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಬಳಿಯ ಮಾಲಂಬಿ ಗ್ರಾಮದ ಯೋಧ ಪಿ.ಪಿ.ದಿವಿನ್(28) ಸ್ಥಿತಿ ಚಿಂತಾಜನಕವಾಗಿದೆ. ದಿವಿನ್ ಪಾಲಕರಿಗೆ ಮಿಲಿಟರಿ ಅಧಿಕಾರಿಗಳು ಮಾಹಿತಿ ನೀಡಿದ್ದು ಈ ಸಂಬಂಧ ಪಾಲಕರು ಗುರುವಾರ ಜಮ್ಮುವಿನ ಉದಮಪುರಕ್ಕೆ ತೆರಳಿದ್ದಾರೆ.

ಮಾಲಂಬಿ ಗ್ರಾಮದ ಪಳಂಗೋಟು ಪ್ರಕಾಶ್ ಮತ್ತು ಜಯ ದಂಪತಿ ಏಕೈಕ ಪುತ್ರನಾದ ದಿವಿನ್ 10 ವರ್ಷಗಳ ಹಿಂದೆ ಭಾರತೀಯ ಭೂ ಸೇನೆಗೆ ಸೇರಿದ್ದರು. ದಿವಿನ್ ಸಮರಾಟ ರಿಜಿಮೆಂಟ್‌ನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು. ಬುಧವಾರ ಬೆಳಗ್ಗಿನ ಜಾವ ಸೇನೆಯ ಮರಾಠ ರಿಜಿಮೆಂಟಿಗೆ ಸೇರಿದ ವಾಹನದಲ್ಲಿ ಯೋಧ ದಿವಿನ್ ಸೇರಿದಂತೆ 10 ಯೋಧರು ಎಂದಿನಂತೆ ಪೆಟ್ರೊಲಿಂಗ್‌ಗೆ ತೆರಳುತ್ತಿದ್ದಾಗ ವಾಹನ ಜಮ್ಮು ಕಾಶ್ಮೀರದ ಪೂಂಚ್‌ಬಳಿ ಪ್ರಪಾತಕ್ಕೆ ಉರುಳಿದೆ. ಈ ದುರಂತದಲ್ಲಿ ಬೆಳಗಾವಿಯ ಇಬ್ಬರು ಮತ್ತು ಉಡುಪಿಯ ಒಬ್ಬ ಯೋಧ ಸೇರಿದಂತೆ ಮೂವರು ಯೋಧರು ಮೃತಪಟ್ಟಿದ್ದರು. ದಿವಿನ್ ಸೇರಿದಂತೆ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಮಿಲಿಟರಿ ಅಧಿಕಾರಿಗಳು ಯೋಧರನ್ನು ಉದಮಪುರದ ಮಿಲಿಟರಿ ಆಸ್ಪತ್ರೆಗೆ ದಾಖಲಿಸಿದ್ದರು.

ಅಪಘಾತದಲ್ಲಿ ಮೃತಪಟ್ಟಿದ್ದ ಮೂವರು ಯೋಧರ ಅಂತ್ಯಕ್ರಿಯೆಯನ್ನು ಗುರುವಾರ ನಡೆಸಲಾಗಿತ್ತು. ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೃತ ಯೋಧರಿಗೆ ಅಂತಿಮ ನಮನ ಸಲ್ಲಿಸಿದ್ದರು.

ಆರೋಗ್ಯ ಸ್ಥಿತಿ ತಿಳಿದುಬಂದಿಲ್ಲ: ದಿವಿನ್ ಸ್ಥಿತಿ ಚಿಂತಾಜನಕವಾಗಿರುವ ಕುರಿತು ಮಿಲಿಟರಿ ಅಧಿಕಾರಿಗಳು ದಿವಿನ್ ಪಾಲಕರಿಗೆ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ದಿವಿನ್ ತಾಯಿ ಜಯ ಮತ್ತು ಸಂಬಂಧಿಕರು ಉದಮಪುರಕ್ಕೆ ತೆರಳಿದ್ದಾರೆ. ದಿವಿನ್ ಆರೋಗ್ಯ ಪರಿಸ್ಥಿತಿ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ. ದಿವಿನ್ ತಂದೆ ಪ್ರಕಾಶ್ ಎರಡು ವರ್ಷಗಳ ಹಿಂದೆ ಅನಾರೋಗ್ಯದಿಂದ ತೀರಿಕೊಂಡಿದ್ದರು. ತಾಯಿ ದಿವಿನ್‌ಗೆ ವಿವಾಹ ಮಾಡಲು ನಿಶ್ಚಯಿಸಿ ಪಿರಿಯಾಪಟ್ಟಣದ ಹುಡುಗಿಯೊಂದಿಗೆ ಕೆಲ ತಿಂಗಳ ಹಿಂದೆ ನಿಶ್ಚಿತಾರ್ಥ ಸಹ ಮುಗಿಸಿದ್ದರು. ಬರುವ ಫೆಬ್ರುವರಿಯಲ್ಲಿ ವಿಹಾಹದ ದಿನಾಂಕ ನಿಗದಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net