

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಳೆದ ತಿಂಗಳು ಸತತವಾಗಿ ಸುರಿದ ಮಳೆಗೆ ನಗರದ ಬಹುತೇಕ ರಸ್ತೆಗಳು ಹಾಳಾಗಿವೆ. ಕೆಲ ಕಡೆಗಳಲ್ಲಿ ರಸ್ತೆಯಲ್ಲಿ ಗುಂಡಿ ಇವೆಯೋ? ಅಥವಾ ಗುಂಡಿಯಲ್ಲೇ ರಸ್ತೆ ಇದೆಯೇ ಎಂಬುವಷ್ಟರ ಮಟ್ಟಿಗೆ ಹಾಳಾಗಿವೆ. ಕೆಲ ಬಡಾವಣೆಗಳಲ್ಲಿ ಮಣ್ಣಿನ ರಸ್ತೆಗಳು ಸಂಪೂರ್ಣ ಕೆಸರು ಗದ್ದೆಯಾಗಿವೆ…ಇದು ನಗರದಲ್ಲಿನ ರಸ್ತೆಗಳ ಸ್ಥಿತಿ.
ಮಳೆ ನಿಂತು ಸುಮಾರು ದಿನಗಳಾದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಗುಂಡಿ ಮುಚ್ಚುವ ಕೆಲಸ ಮಾಡುತ್ತಿಲ್ಲ. ಇದೀಗ 3-4 ದಿನಗಳಿಂದ ಮತ್ತೆ ಸುರಿಯುತ್ತಿರುವ ಮಳೆಯಿಂದ ಗುಂಡಿಯಲ್ಲಿ ನೀರು ತುಂಬಿಕೊಂಡು ವಾಹನ ಸವಾರರ ಸಂಚಾರಕ್ಕೆ ಸಂಚಕಾರ ಎದುರಾದಂತಾಗಿದೆ.
ನಗರದಲ್ಲಿ ಬಹುತೇಕ ಕಡೆಗಳಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗಿವೆ. ಆದರೆ ತಪೋವನ, ಹಾಶ್ಮಿನಗರ, ಮೆಹಬೂಬನಗರ, ಗೌಸಿಯಾ ಟೌನ್, ಬನಶಂಕರಿ ಬಡಾವಣೆ ಸೇರಿ ಇನ್ನೂ ಕೆಲ ಕಡೆಗಳಲ್ಲಿ ರಸ್ತೆಗಳೇ ಇಲ್ಲ. ಅಲ್ಲಿನ ಮಣ್ಣಿನ ರಸ್ತೆಗಳು ಮಳೆಗೆ ಕೆಸರು ಗದ್ದೆಯಂತಾಗಿವೆ. ಬಡಾವಣೆಗಳ ಜನರು ವಾಹನದಲ್ಲಿ ಓಡಾಡುವುದು ಇರಲಿ, ನಡೆದುಕೊಂಡು ಹೋಗಲು ಸಹ ಹರಸಾಹ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಬಹುತೇಕ ಬಡಾವಣೆಗಳು ನಿರ್ಮಾಣವಾಗಿ ದಶಕಗಳು ಕಳೆದಿದ್ದರೂ ಸರಿಯಾದ ರಸ್ತೆ ಇಲ್ಲದಂತಾಗಿದೆ. ರಸ್ತೆ ತುಂಬ ಸಣ್ಣ ಸಣ್ಣ ಕಲ್ಲುಗಳು ಹರಡಿವೆ. ವಾಹನ ಚಲಾಯಿಸಲು ಯೋಗ್ಯವಾಗಿಲ್ಲ. ರಸ್ತೆ ಪಕ್ಕದಲ್ಲಿನ ಮ್ಯಾನ್ ಹೋಲ್ಗಳು ಯಾವಾಗ ಬಾಯ್ತೆರೆದು ಬಲಿಗಾಗಿ ಕಾಯುತ್ತವೆ ಎಂದು ಹೇಳುವುದು ಕಷ್ಟ. ಮಳೆ ಸುರಿದರೆ ಸಾಕು ರಸ್ತೆಗಳು ಕೆಸರು ಗದ್ದೆಯಂತಾಗುತ್ತವೆ. ಜನರು ಭಯದಲ್ಲೇ ಓಡಾಡುವಂತಾಗಿದೆ.
ಇನ್ನೂ ಕೆಲ ಕಡೆಗಳಲ್ಲಿ ಸರಿಯಾಗಿ ಇದ್ದ ರಸ್ತೆಗಳನ್ನು ನಾನಾ ಕಾರಣಗಳಿಗೆ ಅಗೆದು ಹಾಳು ಮಾಡಿದ್ದಾರೆ. ಇಂತಹ ಕಡೆಗಳಲ್ಲಿ ಸಹ ವಾಹನ ಸಂಚಾರ, ಜನರ ಓಡಾಟಕ್ಕೆ ಸಮಸ್ಯೆ ಉಂಟಾಗಿದೆ. ಕಾಮಗಾರಿ ನಡೆಸುವ ಸಮಯದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಜನರು ಸಂಕಷ್ಟಕ್ಕೆ ಸಿಲುಕಿವಂತಾಗಿದೆ.
ಬಡಾವಣೆಗಳ ನಿವಾಸಿಗಳು ಡಾಂಬರ್ ಅಥವಾ ಕಾಂಕ್ರೀಟ್ ರಸ್ತೆಗಳ ನಿರ್ಮಾಣಕ್ಕೆ ಪಾಲಿಕೆ ಸದಸ್ಯರಿಂದ ಅಧಿಕಾರಿಗಳವರೆಗೆ ಮನವಿ ಸಲ್ಲಿಸುತ್ತಲೇ ಇದ್ದಾರೆ. ಆದರೆ ಯಾರೊಬ್ಬರೂ ಸ್ಪಂದನೆ ಮಾಡುತ್ತಿಲ್ಲ. ಇದೀಗ ಮತ್ತ ಮಳೆರಾಯ ಕೊಂಚ ಬಿಡುವು ನೀಡಿದ್ದಾನೆ. ಈಗಲಾದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಗುಂಡಿ ಮುಚ್ಚುವ ಕಾರ್ಯ ನಡೆಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ನಿವಾಸಿಗಳ ಆಗ್ರಹ.