ನಾಯಿ ದಾಳಿಯಿಂದ ಬಾಲಕನ ಸ್ಥಿತಿ ಗಂಭೀರ

DOG
Published on

ಗಜೇಂದ್ರಗಡ: ಪಟ್ಟಣದಲ್ಲಿ ಬೀದಿನಾಯಿಗಳ ಹಿಂಡಿನ ದಾಳಿಯಿಂದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಜರುಗಿದೆ.
ವಾಣಿಪೇಟೆಯ ಆದಿತ್ಯ ಹನಮಂತಪ್ಪ ಪವಾರ (9) ಮನೆಗೆ ಊಟಕ್ಕೆ ಹೋಗಿ ವಾಪಸ್ ಬರುವಾಗ 5 ನಾಯಿಗಳು ಏಕಾಏಕಿ ದಾಳಿ ಮಾಡಿವೆ. ದೇಹದ ಹಲವು ಭಾಗದಲ್ಲಿ ಕಚ್ಚಿ ಗಾಯಗೊಳಿಸಿವೆ. ದಾಳಿಯಿಂದ ತಪ್ಪಿಸಿಕೊಳ್ಳಲು ಬಾಲಕ ಪರದಾಡಿದರೂ ಪ್ರಯೋಜವಾಗಿಲ್ಲ. ಕೆಲ ಸಮಯದ ನಂತರ ಸಮೀಪದ ನಿವಾಸಿಗಳು ದೌಡಾಯಿಸಿ ಶ್ವಾನಗಳನ್ನು ಓಡಿಸಿದ್ದಾರೆ. ನಾಯಿಗಳು ಬಾಲಕನ ಮೇಲೆ ದಾಳಿ ಮಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ತಕ್ಷಣವೇ ಪಾಲಕರು ಸಾರ್ವಜನಿಕರ ಸಹಾಯದಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಾಲಕನನ್ನು ಕರೆದೊಯ್ದು ಚುಚ್ಚುಮದ್ದು ಕೊಡಿಸಿದ್ದಾರೆ.

ಹೆಚ್ಚಿದ ಉಪಟಳ: ಪುರಸಭೆ ಅಧಿಕಾರಿಗಳ ಉದಾಸೀನದಿಂದ ಪಟ್ಟಣದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ. ಹಾವಳಿ ತಡೆಯದ ಪುರಸಭೆಗೆ ಸಾರ್ವಜನಿಕರು ಶಾಪ ಹಾಕುತ್ತಿದ್ದಾರೆ.

ಗಲ್ಲಿ ಗಲ್ಲಿಗಳಲ್ಲಿ ತಿರುಗಾಡುತ್ತಿರುವ ಬೀದಿನಾಯಿಗಳ ಹಿಂಡು, ವಾಹನ ಸವಾರರ ಮೇಲೆ ದಾಳಿ ಮಾಡುತ್ತಿವೆ. ಕೆಲ ನಾಯಿಗಳು ಬೈಕ್, ಕಾರುಗಳ ಹಿಂದೆ ಓಡಿ ಬರುತ್ತಿರುವ ಪರಿಣಾಮ ಸವಾರರು ಆತಂಕ ಪಡಬೇಕಾಗಿದೆ. ರಸ್ತೆಯಲ್ಲಿ ಮಕ್ಕಳು, ವೃದ್ಧರು ಸಂಚರಿಸಲು ಹಿಂದೇಟು ಹಾಕುವಂತಾಗಿದೆ. ಬೀದಿನಾಯಿಗಳು ರಾತ್ರಿಯಾದರೆ ನಿವಾಸಿಗಳ ನಿದ್ದೆಗೆಡಿಸುತ್ತಿವೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಪುರಸಭೆಗೆ ಮನವಿ ಸಲ್ಲಿಸಿದ್ದಾರೆ. ಪಟ್ಟಣದ ವಾಣಿಪೇಟೆ, ಬಸವೇಶ್ವರ ವೃತ್ತ, ಸರಾಫ್ ಬಜಾರ್, ದುರ್ಗಾ ವೃತ್ತ, ಅಂಬೇಡ್ಕರ್ ವೃತ್ತದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net