ದುರ್ಬಲಗೊಳ್ಳಲಿದೆ ಕಲ್ಯಾಣ ರಾಜ್ಯದ ಪರಿಕಲ್ಪನೆ

20 KNK 01
ಕನಕಗಿರಿ ವಾಲ್ಮೀಕಿ ವೃತ್ತದಲ್ಲಿ ಸಿಐಟಿಯು ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು. ಕಾರ್ಯದರ್ಶಿ ಪರಶುರಾಮ, ಸಿಐಟಿಯು ಮುಖಂಡರಾದ ಹೊನ್ನಪ್ಪ, ಹುಸೇನ್ ಸಾಬ್ ತಾವರಗೇರಾ, ಶಿವು, ನಿಂಗಪ್ಪ ಇತರರಿದ್ದರು.
Published on

ಕನಕಗಿರಿ: ಕಾರ್ಮಿಕ ವರ್ಗದ ತೀವ್ರ ವಿರೋಧದ ನಡುವೆ 2020ರಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡ ಕೈಗಾರಿಕಾ ಸಂಬಂಧಗಳ ಸಂಹಿತೆ, ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ-ಕೆಲಸದ ಪರಿಸ್ಥಿತಿ ಹಾಗೂ ವೇತನ ಸಂಹಿತೆಗಳನ್ನು ರದ್ದುಪಡಿಸಲು ಆಗ್ರಹಿಸಿ ಸಿಐಟಿಯು ತಾಲೂಕು ಘಟಕದಿಂದ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ತಾಲೂಕು ಅಧ್ಯಕ್ಷ ಮಲ್ಲಪ್ಪ ಮ್ಯಾಗಡೆ ಮಾತನಾಡಿ, ದೇಶದ ಕಾರ್ಮಿಕರ ತೀವ್ರ ವಿರೋಧದ ನಡುವೆ ಕೇಂದ್ರ ಸರ್ಕಾರ 4 ಸಂಹಿತೆಗಳನ್ನು ಜಾರಿಗೆ ತರಲು ಯತ್ನಿಸುತ್ತಿದೆ. ಇವು ಕಾರ್ಮಿಕರ ರಕ್ಷಣಾತ್ಮಕ ಅಂಶಗಳು, ಜೀವಿಸುವ ಹಕ್ಕು, ಮೂಲ ಹಕ್ಕುಗಳು, ವೇತನ ಕುರಿತ ವ್ಯಾಖ್ಯಾನ, ಹೋರಾಟದ ಹಕ್ಕು, ಸಾಮಾಜಿಕ ಭದ್ರತೆ, ಮಾಲೀಕ-ಕಾರ್ಮಿಕ ಸಂಬಂಧ, ವೇತನ ಚೌಕಾಸಿ, ಆರೋಗ್ಯ ಮತ್ತು ಸುರಕ್ಷತೆ ನಿಯಮಗಳನ್ನು ಮೊಟಕುಗೊಳಿಸಲಿವೆ ಹಾಗೂ ಕಲ್ಯಾಣ ರಾಜ್ಯದ ಪರಿಕಲ್ಪನೆಗಳನ್ನು ದುರ್ಬಲಗೊಳಿಸಲಿವೆ. ಕಾರ್ಮಿಕರನ್ನು ನವ ಗುಲಾಮಗಿರಿಗೆ ತಳ್ಳಲಿರುವ ಈ ಸಂಹಿತೆಗಳು ಕಾರ್ಮಿಕರ ಮರಣ ಶಾಸನಗಳಾಗಲಿದ್ದು, ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ತಾಲೂಕು ಕಾರ್ಯದರ್ಶಿ ಬಾಳಪ್ಪ ಹುಲಿಹೈದರ ಮಾತನಾಡಿ, ರಾಜ್ಯದಲ್ಲಿ ದುಡಿತದ ಅವಧಿಯನ್ನು ದಿನಕ್ಕೆ 12 ಗಂಟೆಗೆ ಹೆಚ್ಚಿಸಿರುವ ಆದೇಶ ಕೂಡಲೇ ಹಿಂಪಡೆಯಬೇಕು. ಜೀವನ ಯೋಗ್ಯ ಕನಿಷ್ಠ ವೇತನ 36 ಸಾವಿರ ರೂ. ನಿಗದಿಮಾಡಬೇಕು. ಸಾರ್ವತ್ರಿಕ ಪಿಂಚಣಿ ಜಾರಿಗೊಳಿಸಿ ಕನಿಷ್ಠ 8000 ರೂ. ಪಿಂಚಣಿ ನೀಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ನಗದೀಕರಣ ನಿಲ್ಲಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ದಿನದ ಕೂಲಿ 600 ರೂ.ಗೆ, ದುಡಿತದ ದಿನಗಳನ್ನು 200 ಹೆಚ್ಚಿಸಬೇಕು. ಅಂಗನವಾಡಿ, ಬಿಸಿಯೂಟ, ಆಶಾ ಮುಂತಾದ ಯೋಜನೆಗಳ ಕಾರ್ಮಿಕರನ್ನು ಕನಿಷ್ಠ ವೇತನ ವ್ಯಾಪ್ತಿಗೆ ಒಳಪಡಿಸಬೇಕು. ಅಸಂಘಟಿತ ವಲಯದ ಕಾರ್ಮಿಕರಿಗೆ ಸಮಗ್ರ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net