ಅದಾಲತ್‌ನಲ್ಲಿ ರಾಜಿ ಆದೇಶ ಅಂತಿಮ

12 CRP-6A
ಚನ್ನರಾಯಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಆಯೋಜಿಸಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿ.ಕುಸುಮಾ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.
Published on

ಚನ್ನರಾಯಪಟ್ಟಣ: ಜನಸಾಮಾನ್ಯರ ಅನುಕೂಲದ ದೃಷ್ಟಿಯಿಂದ ಪ್ರಕರಣಗಳು ಶೀಘ್ರ ಇತ್ಯರ್ಥವಾಗಬೇಕೆಂಬ ಸದುದ್ದೇಶದಿಂದ ಮೆಗಾ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ವಿ.ಕುಸುಮಾ ತಿಳಿಸಿದರು.

ಪಟ್ಟಣದ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶನಿವಾರ ಆಯೋಜಿಸಿದ್ದ ಮೆಗಾ ಲೋಕ ಅದಾಲತ್‌ನಲ್ಲಿ ಮಾತನಾಡಿದ ಅವರು, ಪಟ್ಟಣದ ಎಲ್ಲ ನ್ಯಾಯಾಲಯಗಳ ಸಂಕೀರ್ಣದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಕಾನೂನು ಪ್ರಕಾರ ರಾಜಿ ಆಗಬಹುದಾದ ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿ ಇಬ್ಬರಿಗೂ ನ್ಯಾಯ ಒದಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಹಲವು ವರ್ಷಗಳ ಕಾಲ ಕಾನೂನು ಹೋರಾಟ ಮಾಡಿ ಒಬ್ಬರು ಗೆದ್ದರೆ ಮತ್ತೊಬ್ಬರಿಗೆ ಸೋಲಾಗುತ್ತದೆ. ಆದರೆ ಅದಾಲತ್‌ನಲ್ಲಿ ಇಬ್ಬರಿಗೂ ತೃಪ್ತಿಯಾಗುವ ತೀರ್ಮಾನ ಮಾಡಲಾಗುತ್ತದೆ. ಅದಾಲತ್‌ನಲ್ಲಿ ರಾಜಿಯಾದ ಪ್ರಕರಣಗಳ ಆದೇಶ ಅಂತಿಮವಾಗಿರುತ್ತದೆ. ಕಡಿಮೆ ಖರ್ಚಿನಲ್ಲಿ ಶೀಘ್ರ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.

ಪಟ್ಟಣದ ಏಳು ನ್ಯಾಯಾಲಯಗಳಲ್ಲಿ 14,880 ಪ್ರಕರಣಗಳು ಬಾಕಿ ಇದ್ದು, ಇಂದು ನಡೆದ ಅದಾಲತ್‌ನಲ್ಲಿ ವಿವಿಧ ರೀತಿಯ ಸುಮಾರು 1362 ಪ್ರಕರಣಗಳನ್ನು ತೆಗೆದುಕೊಳ್ಳಲಾಗಿತ್ತು. ಅವುಗಳ ಪೈಕಿ 581 ಪ್ರಕರಣಗಳು ರಾಜಿ ಮೂಲಕ ಬಗೆಹರಿದಿವೆ. ಒಟ್ಟು 3.,44,10,641 ರೂ. ನಷ್ಟು ದಂಡ ವಸೂಲಿ, ಪರಿಹಾರ, ವಿಮೆ ಮೌಲ್ಯ ಒಳಗೊಂಡಿದೆ ಎಂದರು.

ರಾಜಿ ಸಂಧಾನದಿಂದ ಕುಟುಂಬ ಜೀವನ ಸುಧಾರಿಸುತ್ತದೆ. ಪ್ರತಿಯೊಂದಕ್ಕೂ ವ್ಯಾಜ್ಯ ಮಾಡಿ ನ್ಯಾಯಾಲಯಕ್ಕೆ ಬರುವುದು ಒಳ್ಳೆಯ ಬೆಳವಣಿಗೆಯಲ್ಲ. ವ್ಯಾಜ್ಯಗಳನ್ನು ದೂರಮಾಡಿ ಸುಖದಿಂದ ಬಾಳಬೇಕು ಎಂದು ದಾಂಪತ್ಯ ಕುಟುಂಬ, ವಾದಿ-ಪ್ರತಿವಾದಿಗಳಿಗೆ ತಿಳಿವಳಿಕೆ ನೀಡಿದರು.

ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಪಕ್ಷಗಾರರು ಯಾವುದೇ ಶುಲ್ಕ, ಖರ್ಚು ವೆಚ್ಚವಿಲ್ಲದೆ ತೀರ್ಮಾನ ಮಾಡಿಕೊಳ್ಳಬಹುದು. ಲೋಕ ಅದಾಲತ್‌ನಲ್ಲಿ ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳನ್ನು ಹೊರತುಪಡಿಸಿ ಇತರ ಪ್ರಕರಣಗಳನ್ನು ರಾಜಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.

ಅದಾಲತ್‌ನಲ್ಲಿ ನಾಲ್ಕನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಂ.ಎಸ್.ಕಲ್ಪನಾ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎ.ಅರುಣಾಕುಮಾರಿ, ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರುಣಾ.ಎಸ್.ಗುಡಿಗೆನ್ನವರ್, ಅಧಿಕ ಸಿವಿಲ್ ನ್ಯಾಯಾಧೀಶರಾದ ಟಿ.ಪಿ.ಪುರುಷೋತ್ತಮ್, 2ನೇ ಅಧಿಕ ಸಿವಿಲ್ ನ್ಯಾಯಾಧೀಶರಾದ ಸುನಿತಾ, 3ನೇ ಅಧಿಕ ಸಿವಿಲ್ ನ್ಯಾಯಾಧೀಶೆ ಮಧುಶ್ರೀ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net