ರಸ್ತೆ ಅತಿಕ್ರಮಿಸಿ ನಿರ್ಮಿಸಿದ್ದ ಕಾಂಪೌಂಡ್ ತೆರವು

13blrp1
ಬಿಕ್ಕೋಡು ಸರ್ಕಾರಿ ಆಸ್ಪತ್ರೆಗೆ ಸೇರಿದ ಜಾಗ ಮತ್ತು ಇಂದಿರಾ ನಗರದ ಸಂಪರ್ಕ ರಸ್ತೆಗೆ ನಿರ್ಮಿಸಿದ್ದ ಕಾಂಪೌಂಡ್ ಅನ್ನು ಜೆಸಿಬಿ ಯಂತ್ರದ ಮೂಲಕ ತೆರವುಗೊಳಿಸಲಾಯಿತು.
Published on

ಬೇಲೂರು: ತಾಲೂಕಿನ ಬಿಕ್ಕೋಡು ಸರ್ಕಾರಿ ಆಸ್ಪತ್ರೆಗೆ ಸೇರಿದ ಜಾಗ ಮತ್ತು ಇಂದಿರಾನಗರದ ಸಂಪರ್ಕ ರಸ್ತೆಗೆ ಕಾಂಪೌಂಡ್ ನಿರ್ಮಿಸಿ ಸಾರ್ವಜನಿಕರು ಓಡಾಡಲು ತೊಂದರೆಯಾಗಿದ್ದ ರಸ್ತೆಯನ್ನು ಬಿಕ್ಕೋಡು ಗ್ರಾಪಂ ಅಧ್ಯಕ್ಷ ಮೋಹನ್‌ರಾಜ್ ನೇತೃತ್ವದಲ್ಲಿ ಒತ್ತುವರಿದಾರರ ಮನವೊಲಿಸಿ ಪೊಲೀಸ್ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮಂಗಳವಾರ ತೆರವುಗೊಳಿಸಲಾಯಿತು.

ಬಿಕ್ಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ರಾಜ್ ಮಾತನಾಡಿ, ಜನಸಾಮಾನ್ಯರಿಗೆ ಮೂಲಸೌಲಭ್ಯ ಕಲ್ಪಿಸುವುದು ನಮ್ಮ ಮೊದಲ ಗುರಿ. ಈ ಹಿನ್ನೆಲೆಯಲ್ಲಿ ಒತ್ತುವರಿ ಮಾಡಿದ್ದ ಸಾರ್ವಜನಿಕ ಸಂಪರ್ಕ ರಸ್ತೆ ಹಾಗೂ ಆಸ್ಪತ್ರೆಗೆ ಸೇರಿದ ಜಾಗವನ್ನು ಬಿಡಿಸುವಂತೆ ಹಾಗೂ ಇಂದಿರಾನಗರ ಬಡಾವಣೆಯ ನಿವಾಸಿಗಳು ಕಳೆದ ಹತ್ತಾರು ವರ್ಷಗಳಿಂದ ಮನವಿ ಸಲ್ಲಿಸಿದ್ದರು. ಆದರೆ ಯಾರೂ ಸಹ ಬಿಡಿಸಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಪೊಲೀಸ್ ಮತ್ತು ಗ್ರಾಮಸ್ಥರು ಒತ್ತುವರಿಯಾಗಿರುವ ಸ್ಥಳ ಪರಿಶೀಲಿಸಿ ಒತ್ತುವರಿ ಮಾಡಿದ್ದವರ ಮನವೊಲಿಸಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲಾಗಿದೆ. ಯಾರೇ ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಡೆದುಕೊಳ್ಳಬೇಕು. ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಗ್ರಾಪಂ ನಡೆದು ಕೊಳ್ಳಲಿದೆ ಎಂದರು.

ಪಿಡಿಒ ಸಂತೋಷ್ ಮಾತನಾಡಿ, ಸರ್ಕಾರಿ ಆಸ್ತಿ ಹಾಗೂ ಸಾರ್ವಜನಿಕ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಒತ್ತುವರಿ ಮಾಡುವುದು ಅಪರಾಧ. ಗ್ರಾಮಗಳು ಅಭಿವೃದ್ಧಿ ಹೊಂದಬೇಕಾದರೆ ಸಾರ್ವಜನಿಕರು ಸಹಕಾರ ನೀಡಬೇಕು. ಇಂದಿರಾನಗರ ಬಡಾವಣೆಯ ಹಲವು ವರ್ಷಗಳ ರಸ್ತೆ ಸಮಸ್ಯೆಗೆ ಪರಿಹಾರ ಕಲ್ಪಿಸಿದ್ದು, ಮುಂದಿನ ದಿನಗಳಲ್ಲಿ ಸಿಮೆಂಟ್ ರಸ್ತೆ ಹಾಗೂ ಬಾಕ್ಸ್ ಚರಂಡಿ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ಆಸ್ಪತ್ರೆ ವೈದಾಧಿಕಾರಿ ಡಾ.ಪ್ರವೀಣ್, ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ನಾರಾಯಣಗೌಡ, ಗ್ರಾಪಂ ಸದಸ್ಯ ರಾಜಶೇಖರ್, ಗ್ರಾಮಸ್ಥರಾದ ಚೇತನ್, ಇಕ್ಬಾಲ್, ಅಬುಬಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net